ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮ

ಕೆ.ಆರ್.ಪೇಟೆ: ನ.08:- ಜಾನುವಾರುಗಳು ಅನ್ನದಾತನ ಪಾಲಿನ ಜೀವನಾಡಿಗಳಾಗಿದ್ದು ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕಾದುದು ರೈತಬಾಂಧವರ ಕರ್ತವ್ಯವಾಗಿದೆ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಅವರು ಪಟ್ಟಣದ ಪಶುಸಂಗೋಪನಾ ಇಲಾಖೆಯ ಆವರಣದಲ್ಲಿ ಗೋವಿಗೆ ಪೂಜೆ ಮಾಡುವ ಮೂಲಕ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಕೃಷಿಯ ಜೊತೆಗೆ ಉಪಕಸುಬುಗಳಾಗಿ ದನಕರುಗಳು, ಕುರಿ, ಎಮ್ಮೆ, ಮೇಕೆ ಮುಂತಾದುವುಗಳನ್ನು ಸಾಕಿಕೊಂಡು ಬರುತ್ತಿದ್ದಾರೆ. ಇವುಗಳು ರೈತಬಾಂಧವರಿಗೆ ಪರೋಕ್ಷವಾಗಿ ಆದಾಯದ ಮೂಲಗಳಾಗಿ, ಕೃಷಿಗೆ ಫಲವತ್ತತೆಯ ಗೊಬ್ಬರವಾಗಿ, ಆರ್ಥಿಕ ಸಂಕಷ್ಟವನ್ನು ನೀಗುತ್ತಾ ಬಂದಿವೆ ಇಂಥಹ ರಾಸುಗಳ ಆರೋಗ್ಯವನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ತಾಲ್ಲೂಕಿನಾದ್ಯಂತ ಕಾಲುಬಾಯಿ ಜ್ವರದ ಲಸಿಕೆ ಕಾರ್ಯಕ್ರಮವನ್ನು ದಿನಾಂಕ 7-11-2022 ರಿಂದ 6-12-2022 ರವರೆಗೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ತಪ್ಪದೇ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು ಮಾತನಾಡಿ ತಾಲೂಕಿನಲ್ಲಿ ಒಂದು ಲಕ್ಷದ ಆರು ಸಾವಿರ ಜಾನುವಾರುಗಳಿದ್ದು ಇವುಗಳಿಗಾಗಿ ಒಂದು ತಿಂಗಳ ಕಾಲ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ, ತಾಲ್ಲೂಕಿನ ಎಲ್ಲಾ ರೈತ ಬಾಂಧವರು, ಪಶುಗಳ ಮಾಲೀಕರು ತಪ್ಪದೆ ತಮ್ಮ ದನಕರುಗಳು ಹಾಗೂ ಎಮ್ಮೆಗಳಿಗೆ ಲಸಿಕೆ ಹಾಕಿಸಿ ರೋಗದಿಂದ ಮುಕ್ತಗೊಳಿಸಬೇಕು. ಎಲ್ಲಾ ಆರು ಹೋಬಳಿಗಳಿಗೂ ಒಂದೊಂದು ತಂಡವನ್ನು ರಚಿಸಿ ಕಾರ್ಯಸೂಚಿ ನೀಡಲಾಗಿದ್ದು ಅದರಂತೆ ದಿನಾಂಕದಂದು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಪಶುಪಾಲನಾ ಇಲಾಖೆಯ ಸಿಬ್ಬಂದಿಗಳು ನಿಮ್ಮ ಗ್ರಾಮಕ್ಕೆ ಬಂದಾಗ ನಿಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ಹಾಕಿಸಿಕೊಳ್ಳುವಂತೆ ಮತ್ತು ಪಶುಪಾಲನೆ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ಲೋಕೇಶ್, ಗುತ್ತಿಗೆದಾರ ಡಿ.ಪಿ.ಪರಮೇಶ್, ತಾಪಂ ಮಾಜಿ ಸದಸ್ಯ ಜಯಕೃಷ್ಣೇಗೌಡ, ಜಾನುವಾರು ಅಧಿಕಾರಿ ಶಂಕರ್, ಕಿರಿಯ ಪಶು ಪರೀಕ್ಷಕ ಕೆ.ಜೆ.ಮಂಜಯ್ಯ, ಯಶೋಧಮ್ಮ, ಮಂಜುನಾಥ್, ಸಂಜಯ್, ವಿನಯ್, ಕುಮಾರಿ, ಗೋವಿಂದರಾಜು, ಭಾಸ್ಕರ್ ಹಾಗೂ ನಿವೃತ್ತ ನೌಕರ ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.