ಜಾನುವಾರುಗಳನ್ನು ಸಂರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ

ಸಂಜೆವಾಣಿ ವಾರ್ತೆ
ಮಂಡ್ಯ: ಮೇ.05: ರಾಜ್ಯದ ಜಾನುವಾರುಗಳನ್ನು ಸಂರಕ್ಷಣೆ ಮಾಡಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಜಾನುವಾರುಗಳನ್ನು ವಂಚನೆ ಮಾಡುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅಶೋಕ್ ಜಯರಾಂ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕ ರಾಜ್ಯದಲ್ಲಿ 1 ಕೋಟಿ 15 ಲಕ್ಷ ಪ್ರಮುಖ ಜಾನುವಾರುಗಳಿದ್ದು, ಇವುಗಳ ಸಂರಕ್ಷಣೆಯನ್ನು ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ.
2023-24ರಲ್ಲಿ ಕರ್ನಾಟಕ ರಾಜ್ಯದ 196 ತಾಲೂಕುಗಳು ಬರಕ್ಕೆ ಒಳಗಾಗಿದ್ದು ಮತ್ತು 27 ತಾಲ್ಲೂಕುಗಳು ಸಾಧಾರಣ ಬರಕ್ಕೆ ಒಳಗಾಗಿದೆ ಎಂದು ಸರ್ಕಾರ ಘೋಷಿಸಿತ್ತು. ಪ್ರಮುಖ ಜಾನುವಾರುಗಳಿಗೆ ಪ್ರತಿದಿನ 6 ಕೆ.ಜಿ ಒಣ ಮೇವಿನ ಅವಶ್ಯಕತೆಯಿದ್ದು, ಚಿಕ್ಕ ಜಾನುವಾರುಗಳಿಗೆ 1/2 ಕೆ.ಜಿ ಒಣ ಮೇವು ಅವಶ್ಯಕತೆಯಿತ್ತು. ಅದನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದರು.
ಹಸಿರು ಮೇವನ್ನು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ, ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ.ಹಸಿರು ಮೇವನ್ನು ಬೆಳೆಯಲು ಗ್ರಾಮಗಳಲ್ಲಿರುವ ಗೋಮಾಳಗಳನ್ನು ಮತ್ತು ಖಾಲಿ ಜಾಗಗಳನ್ನು ಗುರುತಿಸಬೇಕಿತ್ತು. ಕೆರೆ ಮತ್ತು ನದಿ ಪಾತ್ರಗಳಲ್ಲಿ ಜಾಗವನ್ನು ಗುರುತಿಸಿ ಹಸಿರು ಮೇವನ್ನು ಬೆಳೆಯಬೇಕಿತ್ತು. ಈ ಯೋಜನೆಯು ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ಮಿನಿ ಕಿಟ್ ನಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕು ಎಂಬ ಮಾರ್ಗ ಸೂಚಿಯನ್ನು ರಾಜ್ಯ ವಿವತ್ತು ಪ್ರತಿಕ್ರಿಯಾ ನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆಯನ್ನು ಪಾಲಿಸಲು ಸರ್ಕಾರ ವಿಫಲವಾಗಿದೆ. ಜಾನುವಾರುಗಳ ಆರೋಗ್ಯವನ್ನು ಮತ್ತು ಜಾನುವಾರುಗಳನ್ನು ಕಸಾಯಿ ಖಾನೆಗಳಿಗೆ ಮಾರುವುದನ್ನು ತಪ್ಪಿಸಲು ಜಾನುವಾರುಗಳಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಬೇಕಿತ್ತು. ಈ ಕಾರ್ಯಕ್ರಮವು ರಾಜ್ಯದಲ್ಲಿ ಸಮರ್ಪಕವಾಗಿ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗ ತಡೆಗಟ್ಟಲು ಚುಚ್ಚುಮದ್ದು, ಪ್ರತಿ ಜೀವಕ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ರೈತರಿಗೆ ತಲುಪಿಸಿಲ್ಲ. ಜತೆಗೆ ಪೂರಕ ಪೆÇೀಷಣ ಔಷಧಿಗಳನ್ನು ವಿತರಣೆ ಮಾಡದಿರುವುದರಿಂದ ಕಳಪೆ ಸಂತಾನೋತ್ಪತ್ತಿ ಆಗುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಮತ್ತು ಜಾನುವಾರುಗಳ ಸಂತತಿ ಕಡಿಮೆಯಾಗುವ ಸಾಧ್ಯತೆ ಇದೆ. ಈ ಆರೋಪಕ್ಕೆ ಸರ್ಕಾರ ಉತ್ತರಿಸಬೇಕು ಎಂದರು.
ಜಿಲ್ಲಾ ಪಶು ಸಂಗೋಪನಾ ಇಲಾಖಾಧಿಕಾರಿಗಳು ರೈತರಿಗೆ ಜಾಗೃತಿ ಮತ್ತು ಮಾಹಿತಿ ನೀಡಲು ವಿಫಲವಾಗಿದ್ದಾರೆ. ರಾಜ್ಯದಲ್ಲಿ ಎಷ್ಟು ಮಾಹಿತಿ ಮತ್ತು ಜಾಗೃತಿ ಶಿಬಿರಗಳನ್ನು ಏರ್ಪಡಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ರಾಜ್ಯ ಸರ್ಕಾರ ಮುಗ್ಧ ಜೀವಿಗಳಿಗೆ ದ್ರೋಹ ಬಗೆಯುವ ಮೂಲಕ ರಾಜ್ಯದ ಬಹು ಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೆಚ್.ಆರ್.ಅಶೋಕ್ ಕುಮಾರ್, ಜಿಲ್ಲಾ ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಬಸವರಾಜು,ಜವರೇಗೌಡ, ಧರ್ಮ, ನಿಂಗರಾಜ್ ಉಪಸ್ಥಿತರಿದ್ದರು.