ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸನ್ಮಾನ


ಗುಳೇದಗುಡ್ಡ,ಮಾ.6: ಎಲೆಮರೆ ಕಾಯಿಯಂತೆ ತಮ್ಮ ಇಡೀ ಬದುಕನ್ನು ಮೌಖಿಕ ಜಾನಪದ ಪರಂಪರೆಗೆ ಮೀಸಲಾಗಿಟ್ಟಿರುವ ಜನಪದ ಕಲಾವಿದರನ್ನು ಗುರುತಿಸುವ ಮಹತ್ವದ ಕಾರ್ಯ ಕರ್ನಾಟಕ ಜಾನಪದ ಪರಿಷತ್ತಿನದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆಗಿರುವ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ಆಶ್ರಯದಲ್ಲಿ ಇದೇ. ಮಾರ್ಚ್ 12 ರಂದು ಹಂಸನೂರ ನಲ್ಲಿ ಜರುಗಲಿರುವ ಪ್ರಥಮ ತಾಲೂಕಾ ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕಟಗೇರಿ ಗ್ರಾಮದ ಹುಚ್ಚಪ್ಪ ದ್ಯಾವಣ್ಣವರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು. ದ್ಯಾವಣ್ಣವರ್ ಹಿರಿಯ ಜಾನಪದ ಕಲಾವಿದರು. ತತ್ವಪದ, ಭಜನಾಪದ, ಭಾವಗೀತೆಗಳು, ಕೈವಲ್ಯ ಪದ್ದತಿಯ ಗೀತೆಗಳು, ದಾಸರ ಪದಗಳನ್ನು ಸುಮಾರು 5 ದಶಕಗಳಿಂದ ಹಾಡಿಕೊಂಡು ಬಂದಿರುವ ಇವರನ್ನು ಗುರುತಿಸಿ ಸವಾಧ್ಯಕ್ಷರನ್ನಾಗಿ ಮಾಡಿದ್ದು ಕರ್ನಾಟಕ ಜಾನಪದ ಪರಿಷತ್ತಿಗೆ ಹೆಮ್ಮೆ ತಂದಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ತಾಲೂಕು ಅಧ್ಯಕ್ಷ ಡಾ. ಎಚ್.ಎಸ್.ಘಂಟಿ, ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನ್ನವರ್, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಬಸವರಾಜ ಯಂಡಿಗೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಜಾಪ ಕಾರ್ಯದರ್ಶಿ ವಿಠ್ಠಲ ಬದಿ, ಕೆರೂರ ಕಸಾಪ ವಲಯದ ಅಧ್ಯಕ್ಷ ಮಲ್ಲು ಪೂಜಾರಿ, ಮಲ್ಲಿಕಾರ್ಜುನ ಕಲಕೇರಿ, ಎ.ಎಸ್.ಕಾಡರ್, ರಮೇಶ ದ್ಯಾವಣ್ಣವರ್, ತಮ್ಮಣ್ಣ ಕೆಲೂಡೆಪ್ಪ ನಾಯ್ಕರ್, ರಾಮಾರೂಢ ಕಂಬಾರ, ಈರಣ್ಣ ಬಡಿಗೇರ, ಅಂದಾನಯ್ಯ ಹಿರೇಮಠ ಸೇರಿದಂತೆ ಇದ್ದರು.