ಜಾನಪದ ಸಂಸ್ಕೃತಿ ನಮ್ಮ ಹೆಮ್ಮೆ

ದಾವಣಗೆರೆ. ನ.೨; ಕನ್ನಡ ಜಾನಪದ ಸಂಸ್ಕೃತಿಯ  ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ಸಾರಿವೆ.  ಇದು ನಮ್ಮ ಹೆಮ್ಮೆಯ ಸಂಸ್ಕೃತಿ  ಎಂದು ಸಮಾಜ ಸೇವಕರು ಹಾಗೂ ಜಾನಪದ ಗಾಯಕರಾದ ಶ್ರೀಮತಿ ಮಹಾದೇವಮ್ಮ ತಿಳಿಸಿದರು.

ನಗರದ ಪಿ ಬಿ ರಸ್ತೆಯ ಡಿ.ಆರ್.ಆರ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಚರಿಸಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕದ ಜಾನಪದ ಸಂಸ್ಕೃತಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ , ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ನಾಟಕ, ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು ಎಂದು ಜಾನಪದ ಪ್ರಕಾರಗಳನ್ನು ಪರಿಚಯಿಸಿದರು. 

ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು ಎಂದು ವಿವರಿಸಿದರು. ಧ್ವಜಾರೋಹಣ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ಆರ್. ಆರ್ ಶ್ರೀನಿವಾಸ್ ಮಾತನಾಡಿ ಕನ್ನಡ ನಾಡು ನುಡಿಯ ಸೇವೆಗೆ ಬಾಲ್ಯದಲ್ಲೇ ಸಿದ್ಧರಾಗುವ ವಂತೆ ಕರೆ ನೀಡಿದರು. 

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರುಗಳಾದ ಭೋಜರಾಜ ಯಾದವ್, ಬಸವನಗೌಡ, ಸುವರ್ಣ ಸಿ ಕಂಠಿ ಉಪಸ್ಥಿತರಿದ್ದರು .