ಜಾನಪದ ಬೀದಿ ನಾಟಕದ ಕಲಾವಿದರಿಗೆ ತರಬೇತಿ ಕಾರ್ಯಾಗಾರ

ಕೋಲಾರ, ಜ,೨೧-ರಾಷ್ಟ್ರೀಯ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಿ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ವಿಜಯಕುಮಾರಿ ತಿಳಿಸಿದರು.
ನಗರ ಹೊರವಲಯದಲ್ಲಿನ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಲಾರ ಇವರ ಸಹಯೋಗದಲ್ಲಿ ಬೆಂಗಳೂರು ವಿಭಾಗೀಯ ಮಟ್ಟದ ಜಾನಪದ ಬೀದಿ ನಾಟಕ ಕಲಾವಿದರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಬೆಂಗಳೂರು ವಿಭಾಗದ ೯ ಜಿಲ್ಲೆಗಳ ಬೀದಿನಾಟಕ ಕಲಾವಿದರುಗಳಿಗೆ ತರಬೇತಿ ಶಿಬಿರವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಯೋಜನೆಗಳ ಅರಿವು ಮೂಡಿಸಲು ವಿವಿಧ ಗ್ರಾಮಗಳಲ್ಲಿ ಬೀದಿನಾಟಕಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಬೀದಿನಾಟಕಗಳಿಗಾಗಿ ಕಲಾತಂಡಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಅವರುಗಳಿಗೆ ಮೂರು ದಿನದ ತರಬೇತಿ ಕಾರ್ಯಾಗಾರವನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು ಎಂದು ತಿಳಿಸಿದರು.
ಕೋಲಾರ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ|| ನಾರಾಯಣಸ್ವಾಮಿ ಅವರು ಮಾತನಾಡಿ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವಲ್ಲಿ ಬೀದಿನಾಟಕಗಳ ಪಾತ್ರ ಬಹಳ ದೊಡ್ಡದು. ಬೀದಿನಾಟಕ ಮಾಧ್ಯಮವು ಸಾರ್ವಜನಿಕ ಜೀವನಾಡಿಯನ್ನು ಶೀಘ್ರವಾಗಿ ತಲುಪುವ ಮಾಧ್ಯಮವಾಗಿದೆ. ಈ ಮಾಧ್ಯಮವು ಜನಸಾಮಾನ್ಯರ ನೆಚ್ಚಿನ ಮಾಧ್ಯಮವಾಗಿದ್ದು, ಪ್ರಚಾರಗಳಿಗೆ ಅನಾದಿಕಾಲದಿಂದಲೂ ಬಳಸಿಕೊಂಡು ಬಂದಿರುವ ಸಾಂಪ್ರದಾಯಕ ಪ್ರಚಾರ ಮಾಧ್ಯಮವಾಗಿದೆ. ಇಂತಹ ಮಾಧ್ಯಮವನ್ನು ಬಳಸಿಕೊಂಡು ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ. ಆ ಮೂಲಕ ಜನಸಾಮಾನ್ಯರಿಗೆ ಆರೋಗ್ಯದ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮಾ, ರಾಜ್ಯ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್ವರ, ಜಯಲಕ್ಷ್ಮೀ, ವಿಶ್ವೇಶ್ವರಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.