ಜಾನಪದ ಪ್ರಶಸ್ತಿಗೆ ಅಯ್ಕೆ-ಚಂಗಪ್ಪರಿಗೆ ಸನ್ಮಾನ

ಕೋಲಾರ,ಜ.೧೩:ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿಯ ೨೦೨೦-೨೧ ನೇ ಸಾಲಿನ ಪ್ರಶಸ್ತಿಗೆ (ತತ್ವ ಪದ) ಕೋಲಾರ ಜಿಲ್ಲೆಯಿಂದ ಆಯ್ಕೆಯಾಗಿರುವ ಮುಳಬಾಗಿಲು ತಾಲ್ಲೂಕಿನ, ನಾಗಮಂಗಳ ಗ್ರಾಮದ ಕೆ.ಎಸ್.ಚಂಗಪ್ಪ ನವರನ್ನು ಅನುಜಯ ಪ್ರಕಾಶ ರವರಿಂದ ಅವರ ಸ್ವಗ್ರಾಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ನಾಗಮಂಗಳ ಗ್ರಾಮದ ನೂರಾರು ಜನರು ಮತ್ತು ವೇಣುಗೋಪಾಲ ಸ್ವಾಮಿ ಜಾನಪದ ಸಂಘದ ಸಮ್ಮುಖದಲ್ಲಿ ಅನುಜಯ ಪ್ರಕಾಶದ ಲೇಖಕರು ಹಾಗೂ ಸಹಾಯಕ ಪ್ರಾಧ್ಯಾಪಕರೂ ಆಗಿರುವ ಡಾ. ಆರ್.ಶಂಕರಪ್ಪ ಮತ್ತು ಅವರ ಮಿತ್ರ ತಂಡದವರಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆರ್. ಶಂಕರಪ್ಪನವರು ಗ್ರಾಮೀಣ ಪ್ರದೇಶದ ತತ್ವಪದದ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವ ಸರ್ಕಾರ ಮತ್ತು ಜಾನಪದ ಅಕಾಡೆಮಿಗೆ ಧನ್ಯವಾದಗಳನ್ನು ತಿಳಿಸಿ ಪ್ರಶಸ್ತಿ ಪುರಸ್ಕೃತರು ಮತ್ತು ಅವರಿಗೆ ಸಹಕರಿಸಿರುವ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಗ್ರಾಮೀಣ ಜನಪದ ಕಲೆಗಳನ್ನು ಗುರುತಿಸಿ, ಸಹಕರಿಸಿ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದ್ದು ಇಂತಹ ಕಲೆ ಸಾಹಿತ್ಯ ಮತ್ತು ಪ್ರಕಾರಗಳನ್ನು ಪ್ರೋತ್ಸಾಹಿಸಲು ನಾನು ಮತ್ತು ಅನುಜಯ ಪ್ರಕಾಶನ ಸದಾ ಸಿದ್ಧವಾಗಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎ.ವಿ.ರೆಡ್ಡಿ ಆಧುನಿಕ ಯುಗದಲ್ಲಿ ಜಾನಪದ ಕಲೆಗಳನ್ನು ಗುರುತಿಸಿ ಪೋಷಿಸಿ ಬೆಳೆಸುತ್ತಿರುವ ನಾಗಮಂಗಳ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಅಭಿನಂದನೆಗಳು. ಈ ಪ್ರತಿಭೆಯನ್ನು ಈಗಿನ ಜನಾಂಗಕ್ಕೆ ಪ್ರೇರಣೆಯಾಗುವ ರೀತಿಯಲ್ಲಿ ಬೆಳೆಸುವುದರ ಜೊತೆಗೆ ಆಧುನಿಕ ಜನಾಂಗ ಯಾವುದೇ ತಾಂತ್ರಿಕ ನೃತ್ಯ ಪ್ರಕಾರಗಳಿಗೆ ಹೆಚ್ಚು ಪ್ರೋತ್ಸಾಹ ನೀಡದೆ ಗ್ರಾಮೀಣ ಜಾನಪದ ಪ್ರಕಾರಗಳನ್ನು ಅನುಸರಿಸಿ ಪ್ರೋತ್ಸಾಹ ಕೊಡಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಹ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸಗೌಡ ಸಿನಿಮಗಳಿಗೆ ಮಾರುಹೋಗದೆ, ಹೆಚ್ಚಿನ ಪ್ರೋತ್ಸಾಹ ಕೊಡದೆ ಜಾನಪದ ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡಿ ನಿಮ್ಮ ಜೊತೆ ಅನುಜಯ ಪ್ರಕಾಶನ ಮತ್ತು ಡಾ. ಆರ್. ಶಂಕರಪ್ಪನವರ ತಂಡ ಸದಾ ಪ್ರೋತ್ಸಾಹಕ್ಕೆ ನಿಲ್ಲುತ್ತದೆ ಎಂದು ತಿಳಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಾನಪದ ಅಕಾಡೆಮಿ ಪ್ರಶಸ್ತಿ ಪುರುಸ್ಕೃತ ಕೆ.ಎಸ್. ಚಂಗಪ್ಪ, ನನ್ನಲ್ಲಿರುವ ಕಲೆಯನ್ನು ಗುರುತಿಸಿರುವ ಜಾನಪದ ಅಕಾಡೆಮಿ ಹಾಗೂ ಈಗ ಗುರುತಿಸಿ ಸನ್ಮಾನಿಸಿರುವ ಡಾ. ಆರ್.ಶಂಕರಪ್ಪ ಮತ್ತು ಅನುಜಯ ಪ್ರಕಾಶನ ತಂಡಕ್ಕೆ ಧನ್ಯವಾದಗಳು ಎಂದು ತಿಳಿಸಿ, ಈ ಕಲೆಯನ್ನು ನನ್ನ ಗ್ರಾಮದಲ್ಲೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೆ ಪಸರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ತಂಡದ ಸದಸ್ಯರಾದ ಕೆ.ಎಸ್.ಶ್ರೀನಿವಾಸ್, ಮಂಚಿಗಾನಹಳ್ಳಿ ಜಯಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ಮಣಿ, ಶಂಕರಪ್ಪ, ಮಹಿಳಾ ಸಂಘದ ಅನೇಕ ಸದಸ್ಯರು ಮತ್ತು ಉಪಾಧ್ಯಾಯರಾದ ಪಿ.ಜಿ.ವೆಂಕಟರಮಣ, ಸದಾನಂದ ಮತ್ತು ಗ್ರಾಮದ ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.