ಜಾನಪದ ನೃತ್ಯ ಸಂಗೀತೋತ್ಸವ ಕಾರ್ಯಕ್ರಮ

ಚಿತ್ರದುರ್ಗ, ಡಿ.೧; ಜಾಗತೀಕರಣ, ಆಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಈ ಸಂದರ್ಭದಲ್ಲಿಯೂ ಜಾನಪದ ಮಾಧ್ಯಮಗಳು ಇಂದಿಗೂ ಸಶಕ್ತ ಮಾಧ್ಯಮಗಳಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಅಭಿಪ್ರಾಯ ಪಟ್ಟರು.
ನಗರದ ತರಾಸು ರಂಗಮಂದಿರದಲ್ಲಿ ಚಿತ್ರದುರ್ಗ ಮದಕರಿ ಯುವಕ ಸಂಘ, ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಿತ್ರದುರ್ಗ ಕರ್ನಾಟಕ ಜಾನಪದ ಪರಿಷತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿದ್ದ ಜಾನಪದ ನೃತ್ಯ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಮಾಧ್ಯಮ  ಸಂಪ್ರಾದಾಯಿಕ ಹಾಗೂ ಪ್ರಬಲ ಮಾಧ್ಯಮವಾಗಿದ್ದು, ಸಾರ್ವಜನಿಕರಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಲು ಜನಪದ ಕಲಾ ಮಾಧ್ಯಮಗಳು ಇಂದಿಗೂ ಸಶಕ್ತ ಮಾಧ್ಯಮಗಳಾಗಿವೆ. ಜನಪದ ಮಾಧ್ಯಮವನ್ನು ಪೋಷಣೆ ಮಾಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.
ಕಲೆ ಜೀವನದ ಅವಿಭಾಜ್ಯ ಅಂಗ. ಕೇವಲ ಹಣದಿಂದ ಸಂಪದ್ಭರಿತ ಮಾನವ ಸಂಪನ್ಮೂಲ  ಏನಿಸಿಕೊಳ್ಳುವುದಿಲ್ಲ. ಅದರ ಜೊತೆಗೆ ಆರೋಗ್ಯ, ಕಲೆಯೂ ಮುಖ್ಯ. ಆಗ ಮಾತ್ರ ಆರೋಗ್ಯಯುತ ಸಂಪನ್ಮೂಲ ನಿರ್ಮಾಣವಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಜಾಗತೀಕರಣದ ಈ ಸಂದರ್ಭದಲ್ಲಿ ಪರಂಪರೆಯ ಅರಿವಿನ ಸಂಕೇತವಾಗಿರುವ ಜನಪದ ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವೈವಿದ್ಯಮವಾದ ನಮ್ಮ ಬದುಕಿನ ಮೇಲೆ ಆಧುನಿಕತೆ ಪ್ರಭಾವ ಬೀರಿರುವುದರಿಂದ ನಮ್ಮ ಪಾರಂಪರಿಕ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಕಲಾ ಪ್ರಕಾರಗಳು ಆಧುನಿಕತೆಗೆ ತಕ್ಕಂತೆ ಮುಖಾಮುಖಿಯಾಗಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಹಿರಿಯ ಕಲಾವಿದರಾದ ವಿದ್ವಾನ್ ತಿಪ್ಪೇಸ್ವಾಮಿ, ಹಿರಿಯ ಕಲಾವಿದ ಮೂರ್ತಪ್ಪ, ಚಿತ್ರದುರ್ಗ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎ.ನಾಗರಾಜ್, ವದ್ದಿಕೆರೆ ಗುರು ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜ್ ಸೇರಿದಂತೆ ಮತ್ತಿತರರು ಇದ್ದರು.