ಜಾನಪದ ದೇಶದ ಮೂಲ ಸಂಸ್ಕøತಿ, ಪರಂಪರೆ : ಎಂ.ಬಿ.ನಿಂಗಪ್ಪ

ಕಲಬುರಗಿ,ನ.12: ಭಾರತ ದೇಶ ರೈತರು, ಹಳ್ಳಿಗಳಿಂದ ಕೂಡಿರುವುದರಿಂದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದೆ. ರೈತರು, ಜನಸಾಮಾನ್ಯರ ಬಾಯಿಯಿಂದ-ಬಾಯಿಗೆ ಹರಡಿರುವ ಜಾನಪದ ಸಂಸ್ಕøತಿ ದೇಶದ ಮೂಲ ಸಂಸ್ಕøತಿ, ಪರಂಪರೆಯಾಗಿದೆ. ಹುಟ್ಟಿನಿಂದ ಮರಣದವರೆಗೆ ವ್ಯಕ್ತಿಗೆ ನೀಡುವ ಪ್ರತಿಯೊಂದು ಆಚರಣೆ, ಸಂಸ್ಕಾರದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಜಾನಪದ ಸಂಸ್ಕøತಿ, ಪರಂಪರೆಯ ಅಳವಡಿಕೆಯಿಂದ ನಮ್ಮತನ, ದೇಶದ ಮೂಲ ಸಂಸ್ಕøತಿ, ಪರಂಪರೆ ಉಳಿದು, ಬೆಳೆಯಲು ಸಾಧ್ಯವಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಪಟ್ಟಣ ಗ್ರಾಮದ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ ಅವರ ತೋಟದಲ್ಲಿ ದೀಪವಾಳಿ ಹಬ್ಬದ ನಿಮಿತ್ಯ ಭಾನುವಾರ ಸಂಜೆ ಕಜಾಪ ಜಿಲ್ಲಾ ಘಟಕ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದಿಂದ ಜರುಗಿದ ‘ಜಾನಪದ ದೀಪಾವಳಿ ಸಂಭ್ರಮ’ ಕಾರ್ಯಕ್ರಮದಲ್ಲಿ ಜಾನಪದ ಗೀತ ಗಾಯನ, ದನ-ಕರುಗಳಿಗೆ ಬೆಳಗುವಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಮತ್ತು ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ದೀಪಾವಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ರೈತನ ಸಂಗಾತಿಯಾದ ಎತ್ತುಗಳು, ದನ-ಕರುಗಳಿಗೆ ಬೆಳಗಲಾಗುತ್ತದೆ. ದನ-ಕರುಗಳ ಮೇಲಿನ ಪೀಡೆ ಹೋಗಬೇಕು, ಯಾವುದೇ ರೋಗ-ರುಜಿನಿಗಳು ಬರಬಾರದು, ಆರೋಗ್ಯಯುತವಾಗಿರಬೇಕು ಎಂಬ ನಂಬಿಕೆಯಿಂದ ಬೆಳಗಿ, ಗಾಯನದ ಮೂಲಕ ಪ್ರಾರ್ಥಿಸುವ ಪದ್ಧತಿ ಹಿಂದಿನಿಂದಲೂ ನಮ್ಮ ರೈತಾಪಿ ವರ್ಗ ಅನುಸರಿಸಿಕೊಂಡು ಬಂದಿದೆ. ಆದರೆ ಇಂತಹ ಅಪರೂಪದ ಆಚರಣೆಗಳು ಇಂದು ಕಡಿಮೆಯಾಗುತ್ತಿದ್ದು, ಉಳಿಸಿ, ಮುಂದಿನ ಜನಾಂಗಕ್ಕೆ ತಲುಪಿಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪತ ರೈತ ಗುಂಡಪ್ಪ ಧೂಳಗೊಂಡ, ಶಶಿಕಲಾ ಜಿ.ಧೂಳಗೊಂಡ, ಸಿದ್ದು, ಕೋಮಲಾಬಾಯಿ, ಶಿವಶಂಕರ, ಶಂಕರ ಜೇವರ್ಗಿ ಹಾಗೂ ರೈತರು ಇದ್ದರು.