ಜಾನಪದ ಜನ ಸಂಸ್ಕೃತಿಯ ಅವಿಭಾಜ್ಯ ಭಾಗ

ಕುಣಿಗಲ್, ಆ. ೯- ಜಾನಪದ ಜನ ಸಂಸ್ಕೃತಿಯ ಭಾಗವಾಗಿದ್ದು, ಕಲೆಗಳು ಬದುಕಿನ ಅವಿಭಾಜ್ಯ ಅಂಗವಾಗಿದ್ದವು ಎಂದು ಹಿರಿಯ ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ರಾಜ್ಯ ಯಕ್ಷಗಾನ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಕಂಟಲಗೆರೆ ಸಣ್ಣಹೊನ್ನಯ್ಯ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಕೊತ್ತಗೆರೆ ಹೋಬಳಿ, ಬಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳನ್ನು ಉಳಿಸುವಲ್ಲಿ ಯುವ ಜನಾಂಗದ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ, ವಿಜ್ಞಾನ ತಂತ್ರಜ್ಞಾನದ ಅಬ್ಬರದಲ್ಲಿ ದೇಸಿ ಜನಪದ ಕಲೆಗಳು ನಶಿಸುತ್ತಿದ್ದು, ಅವುಗಳು ಸಮುದಾಯದೊಂದಿಗೆ ಮಾತನಾಡುತ್ತಿದ್ದವು, ಬದುಕಿನ ಮೌಲ್ಯ ತತ್ವಗಳನ್ನು ಪಸರಿಸುತ್ತಿದ್ದವು. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಯುವ ಜನಾಂಗ ಕಾರ್ಯಯೋನ್ಮುಖವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ರಮೇಶ್ ಕಪನಿಪಾಳ್ಯ ಮಾತನಾಡಿ, ಸೇವೆ, ತ್ಯಾಗ, ಸಹನೆ, ಸಹಬಾಳ್ವೆ, ಸೌಹಾರ್ದ ಗುಣಗಳನ್ನು ಕಲಿಸುವ ಎನ್‌ಎಸ್‌ಎಸ್ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಜೆ. ಮಾತನಾಡಿ, ಪ್ರಾಣಿ ಪಕ್ಷಿಗಳ ಸಂಕುಲ ಮನುಷ್ಯನಷ್ಟೇ ಪ್ರಕೃತಿಯಲ್ಲಿ ಸ್ಥಾನವನ್ನು ಪಡೆದಿದ್ದು, ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವುದು ಇಂದಿನ ಅಗತ್ಯ, ಇದನ್ನು ಎನ್‌ಎಸ್‌ಎಸ್ ಕಲಿಸುತ್ತದೆ ಎಂದರು.
ಶಿಬಿರದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾಧಿಕಾರಿಗಳು ಹಾಗೂ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಎಂ ಗೋವಿಂದರಾಯ ಎಂ., ಘಟಕ-೨ ರ ಅಧಿಕಾರಿ ಹನುಮಂತಪ್ಪ, ಘಟಕ-೩ ರ ಅಧಿಕಾರಿ ಪ್ರೊ. ನಾಗಮ್ಮ ಎಚ್ ಎನ್, ಭೌತಶಾಸ್ತ್ರ ಉಪನ್ಯಾಸಕ ಮಧು ಮತ್ತಿತರರು ಉಪಸ್ಥಿತರಿದ್ದರು.