ಜಾನಪದ ಕಲೆ ಮತ್ತು ಕಾಯಕ

ಸಂಸ್ಕಂತಿಯ ಸಂಬಂಧ ಕನ್ನಡ ನಾಡು ಕಲೆಗಳ ಬೀಡು ಹಾಗೂ ಕಾಯಕ ಸಂಸ್ಕಂತಿಯ ನೆಲೆವೀಡು. ಇಲ್ಲಿನ ಜಾನಪದ ಕಲೆ ಮಹಾ ಮಾನವತಾವಾದದ ಕಾಯಕ ಸಂಸ್ಕಂತಿಯ ಅವಿಭಾಜ್ಯ ಅಂಗವಾಗಿದೆ. ಕನ್ನಡ ನಾಡು ಸಾವಿರ ವರ್ಷಗಳ ಹಿಂದೆ ವಿಶಾಲವಾಗಿ ಹರಡಿತ್ತು ಎಂದು ಕವಿರಾಜಮಾರ್ಗ ಕೃತಿಯಲ್ಲಿ ಕವಿ ಶ್ರೀ ವಿಜಯ ಹೇಳುತ್ತಾನೆ.
ಕಾವೇರಿಯಿಂದ ಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದ ವಸುದಾವಳಯ ವಿಲಿನ ವಿರ್ಷದ ವಿಷಯ ವಿಶೇಷಂ. ಅದೇ ರೀತಿ ಕನ್ನಡಿಗರು ಜಾನಪದ ಸಂಸ್ಕೃತಿಯಲ್ಲಿ ಎಂದಿಗೂ ಮುಂದೆ ಎಂಬುದನ್ನು ಕವಿ ಹೀಗೆ ಹೇಳುತ್ತಾನೆ.


ಪದನರಿದು ನುಡಿಯಲುಂ ನುಡಿದುದನರಿಯದಾರಯರು ಮಾರ್ಪರಾ ನಾಡವರ್ಗಳ್
ನಿಜದಿಂ ಕುರತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್
ಪ್ರತಿಯೊಂದು ನಾಡಿನ ಜನತೆ, ನೆನೆಪು, ಮಾತುಕತೆ ಮತ್ತು ನಡವಳಿಕೆಗಳಲ್ಲಿ ಪರಂಪರೆಯಿಂದ ಅನೇಕ ಸಂಗತಿಗಳನ್ನು ಹೊತ್ತು ತರುತ್ತಿರುತ್ತಾರೆ. ಆಚಾರ, ವಿಚಾರ, ಪದ್ಧತಿ, ಸಾಹಿತ್ಯದ ಬಗೆಗಳು, ಕ್ರೀಡೆ, ಕಲೆ, ನೃತ್ಯ, ನಾಟಕ, ಅಡುಗೆ, ಉಡುಗೆ, ತೊಡುಗೆ ಮನೋರಂಜನಾ ಮಾಧ್ಯಮಗಳು, ಧಾರ್ಮಿಕ ಕ್ರಿಯೆಗಳು, ಜೀವನ ವಿಧಾನ?ಮುಂತಾದವುಗಳು ಇಲ್ಲಿ ಸೇರಿರುತ್ತವೆ. ಇವುಗಳನ್ನು ಪೂರ್ಣವಾಗಿ ಒಳಗೊಳ್ಳುವ ಚೌಕಟ್ಟನ್ನು ಜಾನಪದ ಎನ್ನವ ವಿಶಾಲವಾದ ಅರ್ಥದಲ್ಲಿ ಕರೆಯುತ್ತದೆ.
ಜನಪದ ಸಾಹಿತ್ಯ, ಗೀತೆ, ಲಾವಣಿ, ಕಾವ್ಯ, ಕಥೆ, ಗಾದೆ, ಒಗಟು ಹೀಗೆ ಇತ್ಯಾದಿ ನಾಡಿನ ಸಾಂಸ್ಕೃತಿಕ ಚರಿತ್ರೆಯ ಹೊಸ ನಿರ್ಮಾಣ. ಇದರಲ್ಲಿಯೇ ವಿಶೇಷವಾಗಿ ಜಾನಪದ ಕಲೆ ಮತ್ತು ಕಾಯಕ ಸಂಸ್ಕಂತಿಯ ಸಂಬಂಧದ ಸ್ವರೂಪ ಬಹಳ ಪ್ರಮುಖ. ಕರ್ನಾಟಕ ವಿಸ್ತಾರವಾದ ಪ್ರದೇಶವಾಗಿದ್ದು, ನಾನಾ ಬಗೆಯ ಪ್ರಾದೇಶಿಕ ವೈವಿಧ್ಯಗಳಿಂದ ಕೂಡಿದೆ.
ಒಂದು ಕಡೆ ಅರಬ್ಬಿ ಸಮುದ್ರ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕರಾವಳಿ ಪ್ರದೇಶ, ಶಿವಮೊಗ್ಗೆಯನ್ನು ಆವರಿಸಿದೆ. ಮಲೆನಾಡು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಣ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗಗಳ ಬಗೆ ಬಗೆಯ ಪದ್ಧತಿಗಳನ್ನು ಅನುಸರಿಸುವ ಗುಂಪುಗಳನ್ನು ಒಳಗೊಡಿದೆ. ಈ ನಡುವೆ ಕೊಡವ, ಕೊಂಕಣಿ, ತುಳು ಮುಂತಾದ ಭಾಷೆಗಳಲ್ಲಿನ ಜಾನಪದ ಸಂಪತ್ತು ಕೂಡಾ ಕರ್ನಾಟಕದ ಆವರಣದ ಒಳಗೆ ಅರಳಿರುವುದನ್ನು ಗಮನಿಸಬೇಕು. ಈ ಎಲ್ಲ ಮೂಲೆ ಮೂಲೆಗಳಲ್ಲಿ ಜಾನಪದ ಸಾಹಿತ್ಯ ಪೂರ್ಣವಾಗಿ ಸಂಗ್ರಹವಾದಾಗ ಮಾತ್ರ ನಮಗೆ ಅದರ ಸ್ವರೂಪದ ಸ್ಪಷ್ಟ ಚಿತ್ರಣ ಮಾಡಲು ಸಾಧ್ಯವಾಗುತ್ತದೆ.
ಜಾನಪದ ಕಲೆ ಮತ್ತು ಕಾಯಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಉತ್ತರ ಕರ್ನಾಟಕದ ಜಾನಪದ ಕಲೆ ಮತ್ತು ಕಾಯಕದ ನಡುವಿನ ಸಂಬಂಧ ಗಮನಿಸಿದಾಗ ಹಸಿವು ನೀರಡಿಕೆಯ ಅರಿವೇ ಇರುವುದಿಲ್ಲ. ಕುಟ್ಟುವಾಗ, ಬೀಸುವಾಗ, ನಾಟಿ ನೆಡುವಾಗ, ಕಳೆ ಕೀಳುವಾಗ ದುಡಿಯುವ ಅನೇಕ ಸಂದರ್ಭಗಳಲ್ಲಿ ಸ್ತ್ರೀಯರು ಮತ್ತು ಪುರುಷರು ದಣಿವು ಆರಿಸಿಕೋಳ್ಳಲು ನಾನಾ ಬಗೆಯ ಪದಗಳನ್ನು ಹಾಡುತ್ತಾರೆ.


ಈ ಹಾಡುವವರು ಮತ್ತು ಕೇಳುವವರಿಗೆ ತಾವು ಮಾಡುತ್ತಿರುವ ಶ್ರಮದ ಕೆಲಸ ಅರಿವಾಗುವುದೇ ಇಲ್ಲ. ಹಾಡುಗಳು ಕೂಡಾ ಮುಗಿಯುವುದಿಲ್ಲಾ. ದೇವರು, ಭಕ್ತಿ, ಪ್ರಕೃತಿ, ತವರಿನವರು, ರಕ್ತ ಸಂಬಂಧ, ಗೆಳೆತನ, ನೋವು-ನಲಿವುಗಳು, ಪ್ರೇಮ, ದಾಂಪತ್ಯಮಯ ಬದುಕು ಇವೇ ಮೊದಲಾದ ಹಲವು ಹನ್ನೊಂದು ಸಂಗತಿಗಳನ್ನು ಈ ಹಾಡುಗಳು ಒಳಗೊಂಡಿರುತ್ತವೆ.
ಜಾನಪದ ಬದುಕಿನಲ್ಲಿ ತಮಗೆ ನಿತ್ಯವೂ ನೆರವಾಗುವುದರ ಬಗ್ಗೆ ಇರುವ ಕೃತಜ್ಞತೆಯ ಭಾವವು ದೈವತ್ವವನ್ನು ಕಾಣುತ್ತದೆ. ನಮ್ಮನ್ನು ಹೊತ್ತಿರುವ ಆಹಾರವನ್ನು ಒದಗಿಸುವ ಕೊನೆಗೆ ತನ್ನಲ್ಲೇ ಸೇರಿಸಿಕೊಳ್ಳುವ ಭೂಮಿಯನ್ನು ತಾಯಿಯೆಂದೇ ಇಲ್ಲಿ ತುಂಬಾ ಕೃತಜ್ಞಾಭಾವದಿಂದ ಕರೆಯುತ್ತಾರೆ. ಹಾಗೆಯೇ ಮಳೆರಾಯ ಮತ್ತು ಊಳುವ ಬಸವಣ್ಣನನು ಕೂಡಾ ಮುಖ್ಯವಾಗಿರುವ ದೈವಗಳು, ಬೀಸುವಜೋಳ-ರಾಗಿಕಲ್ಲು ಕೂಡಾ ಪ್ರವಿತ್ರವಾದುದಲ್ಲವೇನು?
ಬೆಳಗಾಗಿ ಎದ್ದು ಯಾರ್ಯಾರ ನೆನೆದೇವು ಎಳ್ಳು ಜೀರಿಗೆ ಬೆಳೆಯೋಳು | ಭೂಮಿತಾಯಿ ನಾವೆಲ್ಲಾಕೆ ಮೊದಲು ನೆನೆದೇವ || ರಾಗಿ ಬಣ್ಣದ ಕುದರಿ ರಾಜ್ಯಕ್ಕೆ ದೊಡ್ಡದು ರಾಜದೊಳುರಾಜ ಮಳೆರಾಜ | ಬರುವಾಗ ರಾಜೆವ ಕೈಯ ಮುಗಿದಾವ || ಕಸವ ಹೊಡೆದ ಕೈಯ ಕಸ್ತೂರಿ ನಾತವ ಬಸವಣ್ಣ ನಿನ್ನ ಸೆಗಣಿಯ | ಬಳೆದ ಕೈ ಎಸಳೆ ಯಾಲಕ್ಕಿ ಗೊನಿನಾತ || ಊರಿಗೆ ಮಳೆ ಹೊದೊ ಏರುಕಟ್ಟೋ
ಕಂದಯ್ಯಾ ಊರ ಮುಂದಿನ ಬಸವಣ್ಣ | ಕೈ ಮುಗಿದು ಏರುಕಟ್ಟೋ ಮುದ್ದು ಮುಖದವನೆ ||
ಈ ರೀತಿಯಾಗಿ ಎಲ್ಲೆಲ್ಲಿ ಒಳ್ಳೆಯದು ಎಂದು ತಮಗೆ ಅನಿಸುತ್ತದೆ, ಅಲ್ಲಲ್ಲಿ ದೇವರನ್ನು ಕಾಣುವ ಜನಪದ ಬದುಕು, ಆ ದೇವರುಗಳನ್ನು ತಮಗೆ ಗೊತ್ತಿರುವ ಹಿರಿಯ ಗುಣಗಳ ಸರಮಾಲೆಯಲ್ಲಿ ಅಲಂಕರಿಸುತ್ತದೆ. ಒಂದೇ ರೀತಿಯ ಪದಗಳು ಮತ್ತು ಸಾಲುಗಳು ಬೇರೆ ಬೇರೆ ದೇವರುಗಳನ್ನು
ಹೊಗಳುವ ಹಾಡುಗಳು ಕಂಡು ಬರುತ್ತವೆ. ದ್ರಾವಿಡ ಸಂಸ್ಕಂತಿಯ ಮೂಲದ ಸಂಬಂಧದಲ್ಲಿ ತಾಯಿಗೆ ಹೆಚ್ಚಿನ ಮನ್ನಣೆ ಇದ್ದುದರಿಂದ ಅವರ ಗುರುತಾಗಿ ನಮ್ಮಲ್ಲಿ ಹೆಣ್ಣು ದೇವರುಗಳೇ ಹೆಚ್ಚು. ಅವುಗಳ ಬಣ್ಣನೆಯೂ ಕೂಡಾ ಬಗೆ ಬಗೆಯಾಗಿ ಕಾಣಿಸಿಕೊಂಡಿದೆ.
ಬೀಸುವ ಪದ:
ಬಿದರಿನ ಜರಸಿಗೆ ಚದುರಂಗದ ಕಲ್ ಹೂಡಿ, ಮೊದಲಿಗೆ ಸರಸತಿಯ ನೆನೆದೆನು ತಂಗಿ, ರಾಗಿ ಬೀಸೋಣು ಬಾರೆ, ಸರಸತಿ ಎಂಬುವಳು ಸಾವಿರಕೆ ದೊಡ್ಡವಳು, ಎಲ್ಲಿ ಹೋದೆಯಮ್ಮ ಏ ಗಿರಿಜಾತೆ,
ತಂಗಿ ಅಕ್ಕಿ ಬೀಸೋಣ ಬಾರೆ…
ರಾಗಿ ಕಲ್ಲಿನ ಮೇಲೆ :


ರಾಗಿ ಬೀಸುವ ಕಲ್ಲೆ ಚಕ್ಕರ ವಡಿಗಲ್ಲೆ, ರಾದಮುತ್ತಿನ ಕಲ್ಲೆ, ನಮ್ಮನ್ನೆ ಭಾಗ್ಯದ ಕಲ್ಲೆ, ಕೊಡು ಧನಿಯ
ಕಾಲಾಡಿ ಕೈಯಾಡಿ, ತೋಳಾಡಿ ಭುಜವಾಡಿ, ನಾಗರಸಂಪಿಗೆ ನಡುವಾಡಿ, ಕಲ್ಲಮ್ಮ ನಿನ್ನೊಂದಿಗಾಡಿ ದಣಿದೆನು…
ಮೊಸರು ಕಡಿಯುವಾಗ :
ಸಾಕೆಂಬೋ ಹಾಲಿಗೆ ಸಣ್ಣಮಂತಿನ ಕೋಲು, ವಜ್ರಮಾಣಿಕ್ಯದ ಗುರಿಕಣ್ಣ ಹಿಡಕೊಂಡು, ಗೋಪಮ್ಮ ಮೊಸರ ಕಡಿದಾಳ, ಜರಳೆ ಸುತ್ತೆ ಅಕ್ಕಿ ಕೊರಳ, ಸುತ್ತೆಳ ಮುತ್ತು ಗುಡಿಸುತ್ತ, ಗೂಳಿ ಬಸವಣ್ಣ ಗೊರವೂರ ನರಹರಿಯ ಸುತ್ತ ಸರಿಗಂಗೆ…
ಭತ್ತ ಜೋಳ, ಗೋದಿ, ಕಟ್ಟುವಾಗ :
ಹಾಡಾ ಹೇಳ್ವಿಕೆ ಬಲ್ಲೆss ಶೇಡೂsss ಬರವಕೆ ಬಲ್ಲೇ ಕಾಡಾs ಹಿಂಡುಲಿಯಾsss ಯೆಲ್ಲಿ ಬಲ್ಲೆs || ತಂಗೆಮ್ಮs,
ಜೋಡಿನ ಪುಂಡಿsರಾsss ನೆಲಿಬಲ್ಲೆss || ಬತ್ತsಕುಟ್ಟೇನೆ ಬಾsರೆss ವಪ್ಪೂಸಾಯ್ಬನ ಸೋಳಿss, ನನ್ನಣ್ಣನ ಸೋಳಿss ಬಿಡೋ ಸೋಳಿss || ಜಾಂಬರ ಸೋಳಿ ನನ್ಹಾಡಿಗುತ್ತರsವಾssss ಕೊಡೂsಬಾರೇs, ||
ಈ ರೀತಿಯಾಗಿ ಬೀಸುವುದು, ಕಟ್ಟುವುದು, ಮೊಸರು ಕಡೆಯುವುದು, ಮುಗಿಯುತ್ತಾ ಬಂದಂತೆ, ಬೀಸುವ ಕಲ್ಲಿಗೆ ಕುಟ್ಟುವ ಒಳ್ಳೆ ಬಣ್ಣಿಕೇಗೆ ಮೊಸರು ಕಡೆಯುವ ಗಡಿಗೆ ಕಡಿಗೋಲಿಗೆ. ಒಟ್ಟಿನಲ್ಲಿ ಸಹಾಯವನ್ನು ಪಡೆದು ಮತ್ತೆ ಮತ್ತೆ ಪಡೆಯುವ ಗರತಿಯು ಅಲ್ಲೂ ದೇವರ ಮಹಿಮೆಯನ್ನೇ ಕಾಣುತ್ತಾಳೆ. ಕಲ್ಲವ್ವ-ಸರಸ್ವತಿ ತಾಯಿಯಾಗಿ ಬೀಸು ಕಲ್ಲು ಕಾಣಿಸಿದರೆ, ಅದರ ಜೊತೆಗೆ ತಾನು ಇಟ್ಟು ಕೊಂಡಿರುವ ಸಂಬಂಧವನ್ನು ಕುರಿತು ಆಕೆಯ ಹಾಡಿದ್ದನ್ನು ಇಲ್ಲಿ ಗಮನಿಸಬಹುದು.
ನಮ್ಮ ಅಮುಗೆಯರಾಯಮ್ಮನ ವಚನ ಸಾಹಿತ್ಯದಲ್ಲಿ ಏನು ಹೇಳಬಹುದು? ನೋಡೋಣ:
‘ಕಾಯಕದಲ್ಲಿ ನಿರತರಾದರೆ ಗುರುದರ್ಶನವಾದರೂ ಮರೆಯಬೇಕು… ಎಂಬ ಅಮುಗೆಯರಾಯಮ್ಮನ ವಚನ ಕಾಯಕದ ಮೌಲ್ಯವನ್ನು ಸಾರುತ್ತದೆ. ಗುರುಲಿಂಗ ಜಂಗಮರು ಕಾಯಕವನ್ನು ಮೀರಲು ಸಾಧ್ಯವಿಲ್ಲ. ಅವುಗಳಿಗಿಂತ ಕಾಯಕ ಶ್ರೇಷ್ಠವೆಂದು ಒತ್ತಿ ಹೇಳಿದ್ದಾರೆ. ನುಲಿಯ ಚಂದಯ್ಯ, ಗುರುವಾದರೂ ಕಾಯಕದಿಂದಲೇ ಜೀವನ ಮುಕ್ತಿ ಎನ್ನುತ್ತಾರೆ. ಅಂದಂದಿನ ಕಾಯಕ ಮಾಡಿ ಶುದ್ಧರಾಗಬೇಕು ಎನ್ನುತ್ತಾರೆ. ಬಸವಣ್ಣನವರು ಕಾಯಕವೇ ಕೈಲಾಸ’ಎನ್ನುವ ಅವರ ಉಕ್ತಿ ಕಾಯಕದ ಮೌಲ್ಯ ಕತೆಯನ್ನು ಎತ್ತಿ ತೋರುತ್ತದೆ.
ಈ ರೀತಿಯಾಗಿ ನಮ್ಮ ಗರತಿಯರು (ಸ್ತ್ರೀಯರು), ವಚನಕಾರರು, ಜಾನಪದ ಕಲೆ ಮತ್ತು ಕಾಯಕ ಸಂಸ್ಕಂತಿಯ ಸಂಬಂಧ ಸ್ವರೂಪ ಉಳಿಸಿಕೊಂಡು ಬಂದಾಗ ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭೂತಾಯಿ ಕರ್ತೃ, ಮಳೆರಾಯ ಕರ್ಮ, ಕ್ರಿಯಾ ರೈತರು. ಹೀಗಿದ್ದಾಗ ಜಾನಪದ ಕಲೆ ಮತ್ತು ಕಾಯಕ ಸಂಸ್ಕಂತಿಯ ಸಂಬಂಧವನ್ನು ಬಹಳ ಪ್ರಮುಖವಾಗಿ ಅವಲೋಕಿಸಿದಾಗ ತಿಳಿದು ಬರುವುದೇನಂದರೇ, ಮೊದಲನೆಯದಾಗಿ, ಬೆಳೆಗೆ ಸಂಬಂಧಿಸಿದಂತೆ ಅಥವಾ ತನ್ನ ಉದ್ಯೋಗಕ್ಕೆ ಸಂಬಂಧಿಸಿದಂತೆ ಮನಬಿಚ್ಚಿ ಹಾಡಿಕೊಳ್ಳುವ ಸಮಯ – ಸಂದರ್ಭಗಳು ರೈತನಿಗೆ ಬಿತ್ತನೆಕೆಯಿಂದಾ ಪ್ರಾರಂಭಗೊಂಡು ಎಲ್ಲಿಯೂ ಬರುವುದಿಲ್ಲ.
ಮೇಲಾಗಿ ಹಬ್ಬಹರಿದಿನಗಳಲ್ಲಿ ಪ್ರಮುಖವಾಗಿ ಜಾನಪದ ಮತ್ತು ಕಾಯಕದ ಸಂಬಂಧ ಸುಗ್ಗಿಯ ಸಮಯದಲ್ಲಿ ಅಂದರೆ ಹಂತಿ ಸಂದರ್ಭದಂತಹ ಬಂದು ನಿಂತುಕೊಂಡು ಬಿತ್ತಣಿಕೆಯಿಂದ ಪ್ರಾರಂಭಿಸಿ ರೈತನು ತನ್ನ ಬದುಕನ್ನು ಬಸವಣ್ಣನ ದುಡಿಮೆಯನ್ನು, ಗೈದ ಶ್ರಮವನ್ನು ಸಿಂಹಾವಲೋಕನ ಕ್ರಮದಲ್ಲಿ ಎಂಬಂತೆ ಇವೆಲ್ಲವನ್ನು ಇಲ್ಲಿ ತೊಡಗಿಸಿಕೊಳ್ಳುತ್ತಾರೆ.
ಹಂತಿ ಪದ ಬಳಕೆ :
ಹಂತಿಯ ಯತಗೊಳ ಪಂತಿಲೆನಿಂತಾವ ಹಾಡಲೆ ಸುಂಕ ಜಾಡಸೇವೋ ಬಸವಣ್ಣನ ಸುಂಕಿಗೆ ಸಾವಿರ ಬೆಳೆಯಲ್ಲೋ. ಜನಪದದಲ್ಲಿ ಹಂತಿ ಎನ್ನುವುದು ಎತ್ತುಗಳನ್ನು ಸಾಲಾಗಿ ಕಟ್ಟಿ ತುಳಿಸುವುದು”ಎಂಬ ಕ್ರಿಯಾರ್ಥವು ಹೊಂದಿಸಿ ಪದದ ಅರ್ಥ ಮೌಲ್ಯವನ್ನು ವಿಸ್ತರಿಸಲಾಗಿದೆ. ಮೂಲದ ಸಾಲು”ಎಂಬ ನಾಮಾನಾರ್ಥವು ತುಳಿಸುವುದು”ಎಂಬ ಕ್ರಿಯಾರ್ಥವು ಸಮನಾಗಿ ಬೆರೆತು ಹೊಸೆದೊಂದು ವಿಶಿಷ್ಠಾರ್ಥ ಇಲ್ಲಿ ಪ್ರಾಪ್ತವಾಗಿದೆ.
ಇದು ಜಾನಪದದ ಕನ್ನಡ ಶಬ್ದಕೋಶ ಕೊಟ್ಟ ಒಂದು ಕೊಡುಗೆಯೆಂದು ಹೇಳಬೇಕು. ಇದೆಲ್ಲವನ್ನು ಹಿಡಿಕೆಯಲ್ಲಿ ಕೊಟ್ಟುಕೊಂಡು ಡಾ.ಎಂ.ಎಸ್. ಲಟ್ಟಿಯವರು ಹೇಳಿದಂತೆ ಕಣದ ಮಧ್ಯದಲ್ಲಿ ನೆಟ್ಟ ಮೇಟೆಗೆ ಸಾಲಾಗಿ ಎತ್ತುಗಳನ್ನು ಕಟ್ಟಿ, ತೆನೆ ತುಳಸಿ ರಾಶಿ ಮಾಡವುದಕ್ಕೆ ಹಂತಿ’ಎಂದು ಹೆಸರು ಬಂದಿರುತ್ತದೆ.
ಕಣ ಮಾಡುವುದು :
ಹೊಲದ ನಡುವಾಗ ಗಟ್ಟ್ಯನ ಕಣಾಮಾಡಿ ನಡುವೆ ಮೇಟಿಯ ನಿಲ್ಲಿಸ ಸುಗ್ಗಿಯ ರಾಶಿ ಸುರುಆಯ್ತು ಕಣದಾಗ. ರೈತರು ಕಣವನ್ನು ಎಲ್ಲಿ ಬೇಕಾದಲ್ಲಿ ಮಾಡುವುದಿಲ್ಲ. ಸಾಧ್ಯವಾದ ಮಟ್ಟಿಗೆ ಹೊಲದ ಮಧ್ಯಭಾಗದಲ್ಲಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಣದಲ್ಲಿ ಮೇಟಿ ನಡೆಸಿ ಈ ಮೇಟಿಯ ಸುತ್ತಲೂ ನೀರು ಸೆಗಣಿ ಕಲಿಸಿ, ಸಾರಿಸಿ, ಮೇಟೆಗೆ ಪೂಜೆ ಸಲ್ಲಿಸಿ ಬೆಳೆಯ ತೆನೆಗಳ ಸೂಡು ಕಣದಲ್ಲಿ ಹರವಿ ಪದ ಪ್ರಾರಂಭಿಸುತ್ತಾನೆ. ಕಣದ ಪಾಳಿಗಿ ಪೂಜಿ ರಾಗೋಲದಿಂಡಿಗೆ ಪೂಜಿ, ಮೇಟಿಯ ಪೂಜಿ ತೆನಿ ಪೂಜೆ, ಬಸವಣ್ಣನ ಪಾದದ ಪೂಜಿ, ಹಣಿ ಪೂಜಿ, ಮೇಟಿಗೆ ಸಾಲಾಗಿ ಕಟ್ಟಿದ ಎತ್ತುಗಳನ್ನು ಕಣದಲ್ಲಿ ತಿರುಗಿಸುತ್ತ, ಹಾಡುಗಳನ್ನು ಹಾಡುತ್ತ, ಕೆಲಸ ಪ್ರಾರಂಭಿಸುತ್ತಾನೆ.
ಕಡಿಯ ಬುಟ್ಟಿಯನ್ನಿಟ್ಟು, ಕಣದಾಗ ಬಲಗಾಲಿಟ್ಟು, ಕಡಿಸುತ್ತ ಹೊಳ್ಳಿ ಬರತಾನ ನಮ್ಮ ಬಸವ
ಕಾಲ ಗಗ್ಗರಿಯ ನುಡಿಸ್ಯಾನ. ಈ ರೀತಿಯಾಗಿ ಎತ್ತುಗಳು ತಿರುಗುವ ಪರಿಯನ್ನು ಹೇಳುತ್ತ
ಕುಂಕಿಗಳಿಂದ ಕಾಲುಗಳು ಬೇರೆಯಾದ ನಂತರ, ಮರವನ್ನು ಗಾಳಿಗೆ ತೂರತ್ತ ರಾಶಿ ಮಾಡುವರು.
ಈ ರೀತಿಯಾಗಿ ರಾತ್ರಿ ಸಮಯದಲ್ಲಿ ಹಂತಿಯನ್ನು ಕಟ್ಟುವರು. ಇಡೀ ರಾತ್ರಿ ರಾಗವಾಗಿ ರೈತರು ಹಾಡುಗಳನ್ನು ಹೇಳುವರು. ಅನೇಕ ಶಿವಶರಣರನ್ನು ಕುರಿತು ಪದಗಳು ಉತ್ತಮ ಕಾವ್ಯದ ಅನುಭವವನ್ನು ನೀಡುತ್ತಾವೆ. ಬೇರೆ ಬೇರೆಯವರು ಒಟ್ಟಾಗಿ ಸೇರಿ, ತಮ್ಮ ಕೆಲಸದಲ್ಲಿ ಭಾಗವಹಿಸುವದು.
ಹಾಗೆಯೇ ಈ ಪದಗಳು ಸಾಮೂಹಿಕವಾಗಿ ಇವರಿಗೆ ತೃಪ್ತಿಯನ್ನು ನೀಡುತ್ತಿರುತ್ತವೆ. ಶರಣರು ನೆನೆದರೆ, ಸರಗಿಯ ಇಟ್ಟಂಗ. ಅರಳು ಮಲ್ಲಿಗೆ ಮುಡಿದ್ಹಾಂಗ-ಕಲ್ಯಾಣ ಶರಣರ ನೆನಯೋ ಎಲೆ ಮನವೇ, ಹುಗ್ಗಿ ಹೊಳಿಗೆಯಲ್ಲೋ, ಬೆಲ್ಲ ಸಕ್ಕರೆಯಲ್ಲೋ, ಹಿಗ್ಗಿನಲಿ ಉಣ್ಣವನು ನುಚ್ಚಂಬಲಿ – ಸಂಗಯ್ಯ ಸುಗ್ಗಿಯಲಿ ಬಾನಾ ಒಯ್ದಾನ, ರೈತರು ತಮ್ಮ ಕಾಯಕ ಸಂಸ್ಕೃತಿಯಲ್ಲಿ ಬಹಳವಾಗಿ ಬಯಸುವ ದೇವರುಗಳು ಮೂರು. ಭೂಮಿ ತಾಯಿ, ಮಳೆರಾಯ ಮತ್ತು ಬಸವಣ್ಣ. ತನ್ನ ಕೆಲಸ ಕಾರ್ಯಗಳಲ್ಲಿ ತನಗಿಂತ ಹೆಚ್ಚು ಶ್ರಮದಿಂದ ದುಡಿಯುವ ಬಸವಣ್ಣನನ್ನು ಕಂಡರೆ ಆತನಿಗೆ ಗೌರವ ಕೃತಜ್ಞತೆಗಳು ಇದ್ದೇ ಇರುತ್ತದೆ. ನಾನಾ ಬಗೆ ಹಾಡಿ ಹೊಗಳಿದರು ಈತ ತೃಪ್ತಿಯನ್ನು ಕಾಣಲಾರ.
ಭೂಮಿ ಹುಟ್ಟಿದ್ದು ಮೊದಲು, ಭೂಮಿ ಕಟ್ಟಿದ ಮೊದಲು, ಭೂಪ ಹುಟ್ಟಿದ ಬಸವಯ್ಯ ಮ್ಯಾಗಿನ ಶಿವಗೇಳು ದಿನಕ ಹಿರಿಯಾನು ತುಂಬಿದ ಹೊಳೆಯಾಗ ಕೊಂಬ ಕಾಣುಸತಾವ ಬಂಗಾರದಿನಿಯ ಬಸವಣ್ಣ – ಬರುವಾಗ ತುಂಬಿದ ಗಂಗೆ ತುಳಿಕ್ಯಾಳ ಕಟ್ಟಿ ಮಣ್ಣನು ತಂದು ಕೆತ್ತಿ ಬಸವನ ಮಾಡಿ ಎತ್ತೆನ್ನಬಹುದೆ ಬಸವಯ್ಯ – ನಿಮಪಾದ ಪಟ್ಟೊಳ್ಳಿ ಇಟ್ಟು ಶರಣಂದೆ ಕರಿಯ ಕೋಡಿನ ಬಸವ ಕೆರೆಯಾಗ ಹ್ಯಾಂಗಿದ್ದೊ? ಕೆರಿ ಒತ್ತಿ ಕೆರಿಯ ಮಳಲೊತ್ತಿ – ಬಸವಾನ ಕರದ ಬಾಡ್ಯಾವ ಬಿಸಲೀಗ
ಹೀಗೆ ತಮತಮಗೆ ಬೇಕಾದ ದೇವರುಗಳನ್ನು ಕುರಿತು ಪದಗಳನ್ನು ಹೇಳುವ ರೈತರು ಬೇಸರ ಪರಿಹಾರಕ್ಕಾಗಿ ಹಾಸ್ಯ ಹಾಗೂ ಪ್ರಣಯ ಗೀತೆಗಳನ್ನು ಹೆಚ್ಚಾಗಿ ಹಾಡಿ ತಮ್ಮ ಕಣ್ಣನ್ನು ಕವಿಯುವ ನಿದ್ದೆಯನ್ನು ಹೋಗಲಾಡಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ತಮ್ಮ ಕಾಯಕಕ್ಕೆ ತಕ್ಕೆಂತೆ ಕಂಬಾರರು, ಕುಂಬಾರರು, ಬಡಿಗರು, ಚಮ್ಮಾರರು ಮತ್ತು ವೃತ್ತಿನಿರತ ಕಲಾವಿದರಾದ
ಹೆಳವರು, ಗೊಂದಲಿಗರು, ಗೊರವರು, ಗೀಗಿ ಪದದವರು ಈ ಒಂದು ಜಾನಪದ ಕಲೆ ಮತ್ತು ಕಾಯಕ ಸಂಬಂಧದ ಸ್ವರೂಪವನ್ನು ತಮ್ಮ ಕ್ಷೇತ್ರಕ್ಕನುಗುಣವಾಗಿ ಕಾಯಕವನ್ನು
ಮಾಡುತ್ತಾರೆ. ಈ ರೀತಿಯಾಗಿ ಜಾನಪದ ಕಲೆಯು ಕಾಯಕ ಸಂಸ್ಕಂತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ.

  • ಲೇಖಕರು
    ಶ್ರೀ ಪ್ರಭು ಬಸಪ್ಪ ಕುಂದರಗಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕಂತರು,
    ಜಾನಪದ ತಜ್ಞರು, ಸಾಹಿತಿಗಳು, ನಟರು, ನೀರ್ದೆಶಕರು.
    ಸಾ|| ಇಟಿಗಟ್ಟಿ ತಾ||ಜಿ|| ಧಾರವಾಡ