ಜಾನಪದ ಕಲೆ ಗ್ರಾಮೀಣರ ಜೀವನಾಡಿ : ಮಣಕವಾಡ ಶ್ರೀ


ಶಿರಹಟ್ಟಿ,ಡಿ1: ಜಾನಪದವು ಗ್ರಾಮೀಣ ಜನರ ಜೀವನಾಡಿಯಾಗಿದ್ದು, ಬದುಕಿನ ಕಟ್ಟುಪಾಡುಗಳು ದೀಪದಂತೆ ಸದಾ ಪ್ರಜ್ವಲಿಸುವ ಜಾನಪದ ಹಾಡುಗಳಲ್ಲಿ ಅಡಗಿದೆ ಎಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.
ಪಟ್ಟಣದ ಮೇಗೇರಿ ಓಣಿಯಲ್ಲಿ ಶ್ರೀ ಕರಿಶಿದ್ದೇಶ್ವರ ಕಾರ್ತಿಕೋತ್ಸವದ ಅಂಗವಾಗಿ “ಜಾಣ ಜಾಣರ ಜಾನಪದದ ಗಮ್ಮತ್ತು ನಿನಗೆಷ್ಟು ಗೊತ್ತು” ಎಂಬ ಭರ್ಜರಿ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮ ಜಾನಪದ ಕಲೆಯನ್ನು ಅವಸಾನಕ್ಕೆ ದುಡುತ್ತಿದ್ದೇವೆ. ಹಿಂದೆ ಶ್ರಮ ಜೀವಿಗಳಾದ ಗ್ರಾಮೀಣ ಜನರ ಮಾನಸಿಕ ಉಲ್ಲಾಸಕ್ಕೆ ಜಾನಪದ ಕಲೆಗಳೇ ಆಧಾರವಾಗಿತ್ತು. ನಾಟ್ಯ, ರಂಗಭೂಮಿ, ಜಾನಪದ ಕಲಾವಿದರಿಗೆ ಭಾರೀ ಬೇಡಿಕೆ ಇತ್ತು. ಜನರ ನಾಡಿ ಮಿಡಿತಗಳಾದ ಡೊಳ್ಳು ಕುಣಿತ, ದೊಡ್ಡಾಟ, ಯಕ್ಷಗಾನ, ರಂಗ ಭೂಮಿಗಳಲ್ಲದೇ ರಾಗಿ ಬೀಸುವ, ಭತ್ತ ಕುಟ್ಟುವ, ಕಳೆ ತಗೆಯುವ, ಜೋಗುಳ ಹಾಡು, ಕಣಜ ರಾಶಿ ಮಾಡುವಾಗ ಹೇಳುವ ಹಾಡುಗಳು ರೈತ ಸಮೂಹದ ಶ್ರಮವನ್ನು ಮರೆಯಲು ಅವಕಾಶ ನೀಡುತ್ತಿತ್ತು, ಅಲ್ಲದೇ ನಮ್ಮ ಬಡತನ, ಸಿರಿತನ, ಗ್ರಾಮೀಣ ಬದುಕಿನ ಶೈಲಿಯ ಹಾಡುಗಳು ನಮ್ಮ ಸಂಸ್ಕøತಿಯನ್ನು ವಿಕಸನ ಮಾಡುತ್ತಿದ್ದವು, ಜನರಿಂದ ಜನರಿಗಾಗಿ ಹರಡುವ ಜಾನಪದ ಕಲೆಗಳ ಜನರಲ್ಲಿ ವೈವಿಧ್ಯತೆಯನ್ನು ಮೂಡಿಸುತ್ತಿದ್ದವು. ಇಂತಹ ಜಾನಪದ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ಸರ್ವರಿಂದ ನಿತ್ಯ ನಿರಂತರ ಸಾಗಬೇಕು ಎಂದರು.

ಈ ವೇಳೆ ಶ್ರೀ ಚನ್ನಯ್ಯ ಅಮೋಘಿಮಠ ಶ್ರೀಗಳು, ವೈ.ಎನ್. ಗೌಡ್ರ, ಭರತ ನಾಯಕ, ಡಿ.ಕೆ. ಹೊನ್ನಪ್ಪನವರ, ಯಲ್ಲಪ್ಪಗೌಡ ಅಣ್ಣಿಗೇರಿ, ನಾಗರಾಜ ಲಕ್ಕುಂಡಿ, ದೇವಪ್ಪ ಬಟ್ಟೂರ, ಗೂಳಪ್ಪ ಕರಿಗಾರ, ಸಂತೋಷ ಕುರಿ, ನೀಲಪ್ಪ ಪಡಿಗೇರ, ಮಾಬುಸಾಬ ಲಕ್ಷ್ಮೇಶ್ವರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.