ಜಾನಪದ ಕಲೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕು

ಕೋಲಾರ,ಮ,೧೫- ಜಾನಪದ ಅಧ್ಯಯನವು ಅನ್ನ ನೀಡುವ ಅಧ್ಯಯನ ವಿಷಯವಾಗಿದೆ. ಹಾಗೆಯೇ ಜನಪದ ಕಲೆ ಕಲಿತವರಿಗೆ ಅದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ನಿರಂಜನ ವಾನಳ್ಳಿ ರವರು ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಕೈವಾರದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಸ್ಥೆ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಫಾಸಿಲ್ಸ್‌ನ ೨೯ನೇ ವಾರ್ಷಿಕ ಸಮಾವೇಶ ಮತ್ತು ಅಖಿಲ ಭಾರತ ಜಾನಪದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜಾನಪದ ಅಧ್ಯಯನವು ಪಠ್ಯವಾಗಿ ಬರಬೇಕಾಗಿದೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯದಲ್ಲಿನ ಓದಿನ ಕೋರ್ಸುಗಳ ಸ್ವರೂಪದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಸೂಚಿಸುತ್ತಾ, ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಸ್ಥೆ ಜಾನಪದಕ್ಕಾಗಿ ದುಡಿಯುತ್ತಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮುನಿವೆಂಕಟಪ್ಪನವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಫಾಸಿಲ್ಸ್‌ನ ಪ್ರಧಾನ ಕಾರ್ಯದರ್ಶಿ ಡಾ.ನಜೀಂದೀನ್ ಕೇರಳ ವಿಶ್ವವಿದ್ಯಾಲಯ ರವರು ಫಾಸಿಲ್ಸ್‌ನ ಕಾರ್ಯವಿಧಾನವನ್ನು ಹಾಗೂ ಮುಂದಿನ ದಿನಗಳಲ್ಲಿ ಸಂಸ್ಥೆಯು ಹಾಕಿಕೊಂಡಿರುವ ಗುರಿಗಳನ್ನು ಕುರಿತು ವಿವರಿಸಿದರು.
ಸಮಾವೇಶದ ಉದ್ದೇಶವನ್ನು ಕುಪ್ಪಂ ಡ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ.ಎಂ.ಎನ್.ವೆಂಕಟೇಶ್ ರವರು ಮಾತನಾಡಿ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ ಎಪ್ಪತ್ತೇರಡು ಸಂಶೋಧಕರು ಜಾನಪದ ಅಧ್ಯಯನದಲ್ಲಿ ತಮ್ಮ ಸಂಶೋಧನ ಪ್ರಬಂಧಗಳನ್ನು ಮೂರು ದಿನಗಳ ಸಮಾವೇಶದಲ್ಲಿ ಮಂಡಿಸಲಿದ್ದಾರೆ ಎಂದು ಪ್ರಾಸ್ತಾವಿಕವಾಗಿ ನುಡಿದರು.
ಡಾ.ಎನ್.ಮುನಿರಾಜು ಸ್ವಾಗತಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ವಿ.ಎಲ್.ಪಾಟೀಲ್ ರವರು ವಿಚಾರ ಸಂಕಿರಣದ ಆಶಯಗಳನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ವಿಜೇತ ಕಲಾವಿದ ಮುನಿವೆಂಕಟಪ್ಪನವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಧುರೈ ವಿಶ್ವವಿದ್ಯಾಲಯದ ಡಾ.ಸರಸ್ವತಿ ವೇಣುಗೋಪಾಲ್, ಪಾಂಡಿಚೇರಿ ವಿಶ್ವವಿದ್ಯಾಲಯದ ಡಾ.ಚೆಲ್ಲ ಪೆರುಮಾಳ್, ಡ್ರಾವಿಡ ವಿಶ್ವವಿದ್ಯಾಲಯದ ಪ್ರೊ.ಕೆ.ಎಸ್.ಶ್ಯಾಮಲ, ಪ್ರೊ.ಬಿ.ಕೃಷ್ಣಾರೆಡ್ಡಿ, ಲಲಿತಕಲಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಎಸ್.ಸಿ.ಪಾಟೀಲ್, ಕೈವಾರ ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.