
ಸಂಜೆವಾಣಿ ವಾರ್ತೆ
ಬಳ್ಳಾರಿ ಸೆ:16 ಜಾನಪದ ಕಲೆಗಳಲ್ಲಿ ತೊಗಲುಗೊಂಬೆ ಕಲೆಯು ಅತ್ಯಂತ ಪ್ರಾಚೀನ ಮತ್ತು ವಿಶಿಷ್ಟ ಕಲೆಯಾಗಿದೆ. ಈ ಕಲೆಯ ಮುಖಾಂತರ ರಾಮಾಯಣ, ಮಹಾಭಾರತ ಅಲ್ಲದೇ ಆಧುನಿಕ ಪ್ರಸಂಗಗಳನ್ನು ಸೊಗಸಾಗಿ ಹೇಳುತ್ತಲೇ ಪ್ರೇಕ್ಷಕರಿಗೆ ಮನೋರಂಜನೆಯ ಜೊತೆಗೆ ತಿಳುವಳಿಕೆಯನ್ನು ನೀಡುವುದಾಗಿದೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ ನುಡಿದರು
ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಹಾಗೂ ಶ್ರೀಮತಿ ಸರಳಾದೇವಿ ಕಾಲೇಜು, ಕನ್ನಡ ವಿಭಾಗ ಬಳ್ಳಾರಿ ಇವುಗಳ ಸಂಯುಕ್ತಾಶ್ರದಲ್ಲಿ ನಡೆದ ಸಾಂಸ್ಕೃತಿಕ ಕಲರವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಈ ಮೇಲಿನಂತೆ ಅವರು ಮಾತನಾಡಿದರು
ತೊಗಲುಗೊಂಬೆ ಕಲೆ ಬಳ್ಳಾರಿ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ. ಹೊಸ ತಲೆಮಾರಿನವರು ಈ ಕಲೆಯ ಬಗೆಗೆ ಆಸಕ್ತಿ ಮತ್ತು ಪ್ರೀತಿಯನ್ನು ಬೆಳಿಸಿಕೊಂಡು ಸಾಗಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರಂಗಕರ್ಮಿ ಕೆ. ಜಗದೀಶ್ ಅವರು ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಸಾಹಿತ್ಯದ ಓದಿನ ಅಭಿರುಚಿಯನ್ನು ಮೈಗೂಡಿಸಿಕೊಂಡು ಸಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರದ ಡಾ. ಹೆಚ್. ಕೆ ಮಂಜುನಾಥ ರೆಡ್ಡಿ ಅವರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರೀತಿಯನ್ನು ಮೂಡಿಸುತ್ತವೆ. ವಿದ್ಯಾರ್ಥಿಗಳು ಹವ್ಯಾಸಕ್ಕಾಗಿ ತೊಗಲುಗೊಂಬೆ ಕಲೆಯ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ಪ್ರೊ. ಎನ್ ಶಾಂತನಾಯಕ್, ಅವರಿಗೆ ಹುಲಿಕುಂಟಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಟಿ. ಹೊನ್ನೂರಪ್ಪ, ಪ್ರಾಧ್ಯಾಪಕರಾದ ಡಾ. ದಸ್ತಗೀರ್‍ಸಾಬ್ ದಿನ್ನಿ, ಡಾ. ಶಶಿಕಾಂತ್ ಬಿಲ್ಲವ್, ಕವಿಗಳಾದ ಡಿ. ವೆಂಕಮ್ಮ, ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದ ಕಲಾವಿದರಾದ ಕೆ. ಹೊನ್ನೂರಸ್ವಾಮಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಅಧ್ಯಾಪಕರಾದ ರಾಮಸ್ವಾಮಿ, ಪ್ರವೀಣ್‍ಕುಮಾರ್, ಲಿಂಗಪ್ಪ ಮತ್ತು ಡಾ. ಪಂಚಾಕ್ಷರಿ ಅವರು ಇದ್ದರು.