ಜಾನಪದ ಕಲಾವಿದರಿಗೆ ಸೂಕ್ತ ಸೌಲಭ್ಯಗಳು ದೊರಯಲಿ

ಕಲಬುರಗಿ,ಮಾ.06: ನಮ್ಮ ದೇಶದ ಮೂಲ ಸಂಸ್ಕøತಿ, ಪರಂಪರೆಯಾದ ಜಾನಪದವನ್ನು ಉಳಿಸಿ, ಬೆಳೆಸುತ್ತಿರುವ ಜಾನಪದ ಕಲಾವಿದರಿಗಿಂದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಮಾಸಾಶÀನ, ಪ್ರಶಸ್ತಿ-ಪುರಸ್ಕಾರ, ಗೌರವಗಳು, ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಆದ್ಯತೆ, ವಸತಿ ಸೌಕರ್ಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಸರ್ಕಾರವು ಜಾನಪದ ಕಲಾವಿದರಿಗೆ ಒದಗಿಸಿಕೊಡುವಂತೆ ಹಿರಿಯ ಜಾನಪದ ಕಲಾವಿದ ಯಲ್ಲಪ್ಪ ನಾಟಿಕಾರ ಸರ್ಕಾರಕ್ಕೆ ಒತ್ತಾಸೆ ಮಾಡಿದರು.
ಜೇವರ್ಗಿ ಪಟ್ಟಣದ ಬಸ್ ಸ್ಟಾಂಡ್ ಎದುರುಗಡೆಯಿರುವ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಜಾಪ ಜಿಲ್ಲಾ ಮತ್ತು ತಾಲೂಕಾ ಘಟಕಗಳ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕನ್ನಡ ಜಾನಪದ ಪರಿಷತ್‍ನ 8ನೇ ಸಂಸ್ಥಾಪನಾ ದಿನಾಚರಣೆ : ಜಾನಪದ ಕಲಾವಿದರು ಮತ್ತು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ, ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಜಾನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ನಮ್ಮ ಪರಿಷತ್ ಕಳೆದ 8 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಜಿಲ್ಲೆಯಲ್ಲಿರುವ ಜಾನಪದ ಕಲಾವಿದರನ್ನು ಗುರ್ತಿಸಿ, ಅವರಿಗೆ ವೇದಿಕೆಯನ್ನು ಒದಗಿಸಿಕೊಟ್ಟು, ಅವರಲ್ಲಿರುವ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರಕಿಸಿಕೊಡಲಾಗಿದೆ. ಕಲಾವಿದರಿಗೆ ಸತ್ಕರಿಸಿ, ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು ಇವುಗಳು ಸರ್ಕಾರದ ಮಾಸಾಶನಕ್ಕೆ ಅಗತ್ಯವಾದ ದಾಖಲೆಗಳಾಗಿವೆ. ಜನಪದವು ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಿ ಹೃದಯ ಶ್ರೀಮಂತಿಕೆಯನ್ನು ಉಂಟುಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಹೋಳ್ಕರ್, ತಾಲೂಕಾಧ್ಯಕ್ಷ ದೇವೇಂದ್ರ ಬಿ.ಗುಡೂರ್, ಕಾಲೇಜಿನ ಉಪನ್ಯಾಸಕರಾದ ರಾಯಣ್ಣ ಕಟ್ಟಿಮನಿ, ವೀರೇಶ ಗೋಗಿ, ಮಹಾಂತೇಶ ಹೂಗಾರ, ಮೌನೇಶ ಸೋಮನಾಥಹಳ್ಳಿ, ಸರಸ್ವತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಾನಪದ ಕಲಾವಿದರಾದ ಯಲ್ಲಪ್ಪ ನಾಟಿಕಾರ, ಗೌರಮ್ಮ ತಳವಾರ, ಗಂಗಮ್ಮ ಹಳ್ಳಿ ಮತ್ತು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಆಕಾಶ ತಿಪ್ಪಣ್ಣ, ಸೋಮಪ್ಪ ಭೀಮಪ್ಪ, ಮೌಲನಬಿ, ಜಿಂದಾವಲಿ ಅವರಿಗೆ ಸತ್ಕರಿಸಿ, ಅಭಿನಂದಿಸಲಾಯಿತು. ನಂತರ ಕಲಾ ಪ್ರದರ್ಶನ ಜರುಗಿತು.