ಜಾನಪದ ಉಳಿಸಿ ಬೆಳಸಿ : ಸಿದ್ಧೇಶ್ ಕುರ್ಕಿ

ದಾವಣಗೆರೆ.ಜ.೧೮: ಹಿಂದಿನ ದಿನಗಳಲ್ಲಿ ಬೀಸುವಾಗ, ಕುಟ್ಟುವಾಗ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸೋಬನೆ ಪದಗಳು ರಾರಾಜಿಸುತ್ತಿದ್ದವು. ಇಂದು ಆಧುನಿಕತೆಗೆ ಮಾರು ಹೋಗಿ ಜಾನಪದ ಸೊಗಡನ್ನು ಮರೆತು ಅರೆ-ಬರೆ ಬಟ್ಟೆ ತೊಟ್ಟು ಕ್ಯಾಬರೆ, ಸಿನಿಮಾ ಹಾಡಿನ ಕುಣಿತವನ್ನು ಪ್ರೊತ್ಸಾಹಿಸಿ ಸಮಾಜವನ್ನು ಅಡ್ಡ ದಾರಿಗೆ ತಳ್ಳುತ್ತಿರುವುದು ವಿಷಾದನೀಯ. ಆಧುನಿಕ ಭರಟೆಯಲ್ಲೂ ಹಳ್ಳಿಗಾಡಿನ ಜಾನಪದ ಸೊಗಡನ್ನ ಉಳಿಸಿ ಬೆಳೆಸುವ ಪ್ರಯತ್ನವನ್ನು ಎಲೇಬೇತೂರಿನ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಹಿತಿಗಳಾದ ಎಸ್.ಸಿದ್ದೇಶ್ ಕುರ್ಕಿ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ರೋಟರಿ ಬಾಲವನದಲ್ಲಿ ಎಲೇಬೇತೂರಿನ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ ಆಯೋಜಿಸಲಾಗಿದ್ದ ಜಾನಪದ ಸಂಗೀತ ಹಾಗು ಸೋಬಾನ ಪದಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ನಗರ ಘಟಕದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಪರಮೇಶ್ವರಪ್ಪನವರು ಹರ‍್ಮೋನಿಯಂ ನುಡಿಸುವುದರ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಪತ್ರಕರ್ತರು ಹಾಗೂ ಕನ್ನಡಪರ ಹೋರಾಟಗಾರರಾದ ಐರಣಿ ಬಸವರಾಜರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜಾನಪದದ ಇತಿಹಾಸವನ್ನು ತಿಳಿಸಿ, ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಭಾಗ್ಯಮ್ಮ ಸಂಗಡಿಯರು ಸೋಬಾನ ಪದಗಳನ್ನು ಹಾಡಿದರು. ನಂತರ 18 ಜಾನಪದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಸವರಾಜ ಹೊನ್ನಾಳಿ, ಬಸವೇಶ್ವರ ಕಲಾ ವೇದಿಕೆಯ ಕಾರ್ಯದರ್ಶಿ ಬಸವರಾಜ್ ನಿರ್ಥಡಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ವಾಣಿಶ್ರೀ ನಡೆಸಿಕೊಟ್ಟರು.