ಜಾನಪದಕ್ಕೆ ಅಳಿವಿಲ್ಲ-ಬಾಲಾಜಿ

ರಾಮನಗರ.ಮಾ೨೮: ಜಾನಪದಕ್ಕೆ ತನ್ನದೇ ಆದ ಹಿಡಿತವಿದೆ. ಯಾವುದೇ ಕಾಲಕ್ಕೂ ಎಷ್ಟೇ ಶತಮಾನಗಳು ಕಳೆದರೂ ಜಾನಪದ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಶಿಸಿ ಹೋಗುವುದಿಲ್ಲ ಎಂದು ಜಾನಪದ ಎಸ್.ಬಾಲಾಜಿ ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ವಿಚಾರ ಸಂಕಿರಣ, ಗೀತಗಾಯನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲಾವಿದರ ಬದುಕು ಅತಂತ್ರವಾಗಿದ್ದು, ಜೀವನ ನಡೆಸುವುದು ದುಸ್ತರವಾಗಿದೆ. ಜಾನಪದ ಕಲಾವಿದ ಸತ್ತ ನಂತರ ಶವ ಸಂಸ್ಕಾರ ಮಾಡಲು ಹಣವಿಲ್ಲದೆ ಪರದಾಡುವ ಸ್ಥಿತಿ ಇದೆ. ಸರ್ಕಾರದ ವತಿಯಿಂದಲೇ ಕಲಾವಿದರ ಶವ ಸಂಸ್ಕಾರಕ್ಕೆ ಹಣ ವಿನಿಯೋಗಿಸಬೇಕು. ಜಾನಪದ ಜ್ಞಾನ, ವಿದ್ವತ್ ಇದ್ದವರು ತಮ್ಮ ಜ್ಞಾನವನ್ನು ಇತರರಿಗೆ ಹಂಚಬೇಕು. ರಾಮನಗರ ಜಿಲ್ಲೆಯಲ್ಲಿ ಜನಪದದ ದೊಡ್ಡ ಪರಂಪರೆ ಇದೆ. ಕೋವಿಡ್-೧೯ನಿಂದಾಗಿ ಮೂಲ ಕಲಾವಿದರು ಮೂಲೆಗುಂಪಾಗಿದ್ದಾರೆ. ಜನಪದ ಸಂಗ್ರಹ ಕ್ಷೇತ್ರಕಾರ್ಯ ದಾಖಲೀಕರಣ ಮಾಡುವಲ್ಲಿ ವಿಶ್ವವಿದ್ಯಾಲಯಗಳು ಶ್ರಮ ವಹಿಸಬೇಕು. ಜನಪದ ವಿದ್ವಾಂಸ ಬಿ.ಎಸ್.ಗದ್ದಗಿಮಠ ನೆನಪಿನಲ್ಲಿ ಪ್ರತಿ ವರ್ಷ ೫ ಸಾವಿರ ನಗದು ಬಹುಮಾನವನ್ನು ಕಲಾವಿದರಿಗೆ ನಮ್ಮ ಸಂಸ್ಥೆಯ ವತಿಯಿಂದ ನೀಡುತ್ತೇವೆ. ಕಲಾವಿದರಿಗೆ ಆರೋಗ್ಯ ವಿಮೆಯನ್ನು ಸರ್ಕಾರವೇ ಮಾಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಜಾನಪದ ಪಠ್ಯವನ್ನು ಬೋಧಿಸಬೇಕು. ರಾಮನಗರ ಜಿಲ್ಲೆಯಲ್ಲಿ ಜಾನಪದ ಸಂಪತ್ತು ಹೇರಳವಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದರು.
ಜಾನಪದ ವಿಚಾರ ಸಂಕಿರಣವನ್ನು ಕುರಿತು ಮಾತನಾಡಿದ ಜಾನಪದ ವಿದ್ವಾಂಸ ಕುರುವ ಬಸವರಾಜ್ ಮಾತನಾಡಿ, ಅರಿಶಿಣ-ಕುಂಕುಮ ಹೆಣ್ಣಿಗೆ ಅಲಂಕಾರಿಕವಾಗಿ ಬಳಸುವಲ್ಲಿ ವೈಜ್ಞಾನಿಕತೆ ಇದೆ. ಅರಿಶಿಣದಲ್ಲಿ ನಿರೋಧಕ ಶಕ್ತಿ ಹೆಚ್ಚಿದ್ದು, ಖಾಯಿಲೆ ಕಸಾಲೆಗಳಿಂದ ಕಾಪಾಡುತ್ತದೆ. ಕುಂಕುಮ ಹೆಣ್ಣಿನ ಋತುಸ್ರಾವದ ಸಂಕೇತವಾಗಿದೆ. ಮದುವೆಗಳಲ್ಲಿ ದೇವರು-ದಿಂಡಿರುಗಳು ಕಡಿಮೆ. ಜಾನಪದರು ಬಳಸುವ ವಸ್ತುಗಳಲ್ಲಿ ಶೃಂಗಾರ ಅಲಂಕಾರವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ. ಸಿಪಿಲೆ ಸತೀಶ್ ವಹಿಸಿ ರಾಮನಗರ ಕನ್ನಡ ಜಾನಪದ ಪರಿಷತ್ ಕ್ರಿಯಾಶೀಲವಾಗಿದ್ದು, ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜೀವಂತಗೊಳಿಸುತ್ತಿದೆ. ಇಲ್ಲಿಯ ಕಲೆಯನ್ನು ಕಲಿತು ಮುಂದಿನ ಪೀಳಿಗೆವರೆಗೆ ಕೊಡುಗೆಯಾಗಿ ನೀಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಮನಗರ ಜಿಲ್ಲೆ ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷರಾದ ಮಹಾದೇವಸ್ವಾಮಿ, ಕೂ.ಗಿ.ಗಿರಿಯಪ್ಪ, ಕನ್ನಡ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಅಂಕನಹಳ್ಳಿ ಪಾರ್ಥ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಕಾಂತಪ್ಪ ಉಪಸ್ಥಿತರಿದ್ದರು.
ತಮಟೆ ಕಲಾವಿದ ಚಿಕ್ಕನರಸಯ್ಯ, ಸೋಬಾನೆ ಕಲಾವಿದೆ ಬಾನಂದೂರು ಬೋರಮ್ಮ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.