ಮಹೇಶ್ ಕುಲಕರ್ಣಿ
ಕಲಬುರಗಿ:ಏ.25: ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿಗಳು ಕಣದಲ್ಲಿರುವ ಕಾರಣಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ, ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ರಣನೀತಿಯನ್ನು ದಿನ ಕಳೆದಂತೆಲ್ಲಾ ಮೊನಚುಗೊಳಿಸುತ್ತಾ ಹೊರಟಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಡಾ.ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜೀವನ್ ಯಾಕಾಪುರ ಮಧ್ಯೆ ಬಿರುಸಿನ ಸ್ಪರ್ಧೆ ನಡೆಯುತ್ತಿದೆ.
ಈ ಕ್ಷೇತ್ರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮತದಾರರಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಲಂಬಾಣಿ ತಾಂಡಾಗಳಿವೆ. ಹಾಗಾಗಿ, ಬಂಜಾರ ಸಮುದಾಯದ ಮತಗಳನ್ನು ಸೆಳೆಯಲು ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಜಾಣ್ಮೆ ಪ್ರದರ್ಶನ ಮಾಡುತ್ತಿದ್ದಾರೆ. ಬಂಜಾರ ಸಮುದಾಯದ ನಂತರ ಲಿಂಗಾಯತ, ದಲಿತ ಮತ್ತು ಮುಸ್ಲಿಂ ಮತಗಳು ನಿರ್ಣಾಯಕ ಪ್ರಮಾಣದಲ್ಲಿವೆ. ಇದಕ್ಕೆ ಪೂರಕವಾಗಿ ಕೋಲಿ ಮತ್ತು ಕುರುಬ ಸಮುದಾಯದ ಮತಗಳು ಸಹ ಕ್ಷೇತ್ರದಲ್ಲಿ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುವಲ್ಲಿ ಪ್ರಧಾನ ಪಾತ್ರ ವಹಿಸಲಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯಗಳ ಮತದಾರರನ್ನು ಓಲೈಸುವ ಪ್ರಕ್ರಿಯೆ ಕ್ಷೇತ್ರದಾದ್ಯಂತ ಬಿರುಸಾಗಿ ನಡೆದಿದೆ.
ಏತನ್ಮಧ್ಯೆ, ಬಂಜಾರ ಸಮುದಾಯವನ್ನು ಪ್ರತಿನಿಧಿಸುವ ಬಿಜೆಪಿಯ ಡಾ.ಅವಿನಾಶ್ ಮತ್ತು ಕಾಂಗ್ರೆಸ್ಸಿನ ಸುಭಾಷ್ ರಾಠೋಡ್ ಮಧ್ಯೆ ಬಂಜಾರ ಮತಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಯ ಭಾಗವಾಗಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಬೇರೆ ಬೇರೆ ನಗರಗಳಿಗೆ ಹೊಟ್ಟೆಪಾಡಿಗಾಗಿ ಗುಳೆ ಹೋಗಿರುವ ಸಮುದಾಯದ ಮತದಾರರನ್ನು ಕರೆ ತರುವ ಯತ್ನ ವೇಗ ಪಡೆದುಕೊಂಡಿದೆ. ಜಾಧವ್-ರಾಠೋಡ್ ಮಧ್ಯದ ಈ ಹಗ್ಗ-ಜಗ್ಗಾಟದಲ್ಲಿ ಬಂಜಾರ ಮತದಾರರು ಈ ಬಾರಿ ಯಾರ ಪರವಾಗಿ ಹೆಚ್ಚಾಗಿ ವಾಲುತ್ತಾರೆ ಎಂಬುದರ ಮೇಲೆ ಇವರಿಬ್ಬರ ಹಣೆಬರಹ ನಿರ್ಧಾರಗೊಳ್ಳಲಿದೆ ಎಂದು ಕ್ಷೇತ್ರದ ಮತದಾರರು ಅಭಿಪ್ರಾಯಪಡುತ್ತಾರೆ.
ಇದರ ಜೊತೆಗೆ, ಕ್ಷೇತ್ರದಲ್ಲಿರುವ ಲಿಂಗಾಯತ, ದಲಿತ, ಮುಸ್ಲಿಂ, ಕೋಲಿ ಮತ್ತು ಕುರುಬ ಸಮುದಾಯದ ಮತದಾರರೊಂದಿಗೆ ಸಂಸದ ಡಾ.ಉಮೇಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಹಾಗೂ ಜೆಡಿಎಸ್ ಅಭ್ಯರ್ಥಿ ಸಂಜೀವನ್ ಆರೋಗ್ಯಪೂರ್ಣ ಸಂಬಂಧ ಕಾಯ್ದುಕೊಂಡಿದ್ದಾರೆ. ಈ ಸಂಬಂಧವು ಮತದಾನದ ವೇಳೆ ಎಷ್ಟರಮಟ್ಟಿಗೆ ಅಭ್ಯರ್ಥಿಗಳ ಪರ ಚಲಾವಣೆ ಆಗಲಿದೆ ಎಂಬ ಅಂಶವು ತಾರ್ಕಿಕ ಗೆಲುವಿಗೆ ಹಾದಿ ಮಾಡಿಕೊಡಲಿದೆ ಎಂದು ಕ್ಷೇತ್ರದ ಹಿರಿಯ ಪತ್ರಕರ್ತರೊಬ್ಬರು ಪ್ರತಿಪಾದಿಸುತ್ತಾರೆ.
ಮುಸ್ಲಿಂ ಮತಗಳ ಹಂಚಿಕೆ ಸೃಷ್ಟಿಸಿದ ಕುತೂಹಲ
ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪ್ರಮಾಣದಲ್ಲಿದ್ದಾರೆ. ಈ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯ ಪರ ಯಾವ ಅನುಪಾತದಲ್ಲಿ ಹಂಚಿಕೆ ಆಗಲಿವೆ ಎಂಬ ಕುತೂಹಲ ಕ್ಷೇತ್ರದಾದ್ಯಂತ ವ್ಯಕ್ತವಾಗುತ್ತಿದೆ.
ಮತ್ತೊಂದೆಡೆ, ಸಂಸದ ಡಾ.ಉಮೇಶ್ ಜಾಧವ್ ತಮ್ಮ ಪುತ್ರ ಅವಿನಾಶ್ ಅವರನ್ನು ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ವೈಯಕ್ತಿಕ ನೆಲೆಗಟ್ಟಿನಲ್ಲಿ ಅವರಿಗೂ ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಸಂಬಂಧವಿದೆ. ಈ ಅಂಶವೂ ಮುಸ್ಲಿಂ ಮತಗಳ ಹಂಚಿಕೆಯ ಅನುಪಾತದ ಕುರಿತು ಕುತೂಹಲ ಮೂಡಿಸಿದೆ.
ಈ ಎಲ್ಲ ಅಂಶಗಳ ಮಧ್ಯೆ, ಅವಿನಾಶ್ ಹಾಗೂ ಸುಭಾಷ್‍ಚಂದ್ರ ಎಂಬ ಇಬ್ಬರು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನೇ ಹೋಲುವ ಕಾರಣಕ್ಕೆ ಈ ಇಬ್ಬರೂ ಕ್ಷೇತ್ರದಲ್ಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಎಷ್ಟರಮಟ್ಟಿಗೆ ಮತಬ್ಯಾಂಕ್‍ಗೆ ರಂಧ್ರ ಕೊರೆಯುತ್ತಾರೆ ಎಂಬುದು ಕ್ಷೇತ್ರದ ಮತದಾರರಲ್ಲಿ ಕುತೂಹಲ ಕೆರಳಿಸಿದೆ.
ಇನ್ನು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿಯೂ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 4000 ಹೆಚ್ಚು ಮತಗಳನ್ನು ಪಡೆದಿದ್ದ ಗೌತಮ ಬಕ್ಕಪ್ಪ ಈ ಬಾರಿ ಎಷ್ಟು ಮತಗಳನ್ನು ಕ್ರೋಢೀಕರಿಸಲಿದ್ದಾರೆ ಎಂಬುದು ಸಹ ಪ್ರಮುಖ ಅಂಶವಾಗಲಿದೆ ಎಂದು ಹೇಳಲಾಗುತ್ತಿದೆ.