ಜಾಥಾಗಳ ಮೂಲಕ ಮತದಾನ ಜಾಗೃತಿ :ಶಿಲ್ಪಾ ಎಂ.

ಬೀದರ. ಏ.25: ಬೀದರ ಜಿಲ್ಲೆಯಲ್ಲಿ ಜಾಥಾಗಳ ಮೂಲಕವು ಮತದಾನ ಜಾಗೃತಿ ಮೂಡಿಸಲಾಗುತ್ತಿದ್ದು, ಮಹಿಳೆಯರು ತಮ್ಮ- ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾ ಸ್ವೀಫ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಹೇಳಿದರು.

ಅವರು ಸೋಮವಾರ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಫ್ ಸಮಿತಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಸ್ವ- ಸಹಾಯ ಸಂಘದ ಮಹಿಳೆಯರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೀದರ ಮತ್ತು ಬೀದರ ದಕ್ಷಿಣದಲ್ಲಿ ಕಡಿಮೆ ಮತದಾನವಾದ ಕಾರಣ ಇಲ್ಲಿ ಹೆಚ್ಚು ಮತದಾನ ಆಗಬೇಕೆಂಬ ಕಾರಣದಿಂದ ಜಾಥಾಗಳ ಮೂಲಕ ಬೀದರ ನಗರದಲ್ಲಿಯೂ ಮತದಾನ ಜಾಗೃತಿ ಮೂಡಿಸುವ ಕೆಲಸವನ್ನು ವಿವಿಧ ಸ್ವ- ಸಹಾಯ ಸಂಘಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯ ಮಹಿಳೆಯರು ಇಂದು ಮಾಡುತ್ತಿದ್ದಾರೆ ಎಂದರು.

ಮೇ. 10 ರಂದು ನಡೆಯುವ ಮತದಾನ ದಿನದಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಹಾಗೂ ಸಾರ್ವಜನಿಕರು ತಮ್ಮ ಅಕ್ಕ-ಪಕ್ಕದವರಿಗೆ ಮತದಾನ ಮಾಡುವಂತೆ ಅವರಿಗು ಮತದಾನದ ಮಹತ್ವದ ಕುರಿತು ತಿಳಿ ಹೇಳಬೇಕು. ಮತದಾನ ಕೇಂದ್ರಕ್ಕೆ ನಡೆದುಕೊಂಡು ಹೋಗಲಾಗದ 80 ವರ್ಷ ಮೇಲ್ಪಟ್ಟ ವೃದ್ದರು, ವಿಶೇಷ ಚೇತನರಿಗೆ ಮತದಾನ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಆಟೋ ಮತ್ತು ತ್ರಿಚಕ್ರಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಜಾಥಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಚುನಾವಣಾ ಮಾಸ್ಟರ್ ತರಬೇತಿದಾರ ಗೌತಮ ಅರಳಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಗನ್ನಾಥ ಮೂರ್ತಿ, ಬೀದರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕರಾದ ಪಂಡಿತ್, ಮಹಿಳಾ ಪಿ.ಡಿ.ಓ ಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವ- ಸಹಾಯ ಸಂಘದ ಮಹಿಳೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.