ಜಾತ್ರೆ, ಉತ್ಸವಗಳಿಂದ ಸಾಮರಸ್ಯ ಗಟ್ಟಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.26: ಹಳ್ಳಿಗಳಲ್ಲಿ ಎಲ್ಲ ಜಾತಿ, ವರ್ಗಗಳು ಒಟ್ಟಾಗಿ ಸೇರಿ ಆಚರಿಸುವ ಜಾತ್ರೆ, ಉತ್ಸವಗಳು ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತವೆ ಎಂದು ಶಿಕ್ಷಕ ಹೆಚ್.ಜಿ.ಪಾಟೀಲ್ ಹೇಳಿದರು.
ತಾಲೂಕಿನ ಗುಜನೂರು ಗ್ರಾಮದಲ್ಲಿ ಆಂಜನೇಯ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳಿಗೆ ವಿಶೇಷ ಮಹತ್ವವಿದೆ. ಜಾತ್ರೆ, ಉತ್ಸವ ನೆಪದಲ್ಲಿ ಎಲ್ಲರೂ ಒಗ್ಗೂಡುವುದರಿಂದ ಸಾಮರಸ್ಯ ಬೆಳೆಯುತ್ತದೆ. ಮಕ್ಕಳು, ಯುವಕರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಅರಿತು ಅದನ್ನು ಬೆಳೆಸಬೇಕು ಎಂದು ತಿಳಿಸಿದರು.
ಜೆಸ್ಕಾಂ ಎಇಇ ಸಂತೋಷ ಆನೆಕಲ್, ಮುಖ್ಯಶಿಕ್ಷಕ ಎಂ.ವೀರಣ್ಣ, ನಿವೃತ್ತ ಶಿಕ್ಷಕ ರವೀಂದ್ರ ಕಮ್ಮಾರ, ವಕೀಲ ಅಂಜಿನಪ್ಪ ಮಾತನಾಡಿದರು. ರಾಜಶೇಖರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯೆ ಟಿ.ಹನುಮಂತವ್ವ ಅಧ್ಯಕ್ಷತೆ ವಹಿಸಿದ್ದರು. ದೇವಪ್ಪ, ಚನ್ನಪ್ಪ, ಸಿದ್ದಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಬಸವರಾಜ, ದಾಸಪ್ಪ, ಹೆಚ್.ಮಾರುತಿ, ಹೆಚ್.ಶಾಂತಪ್ಪ ಇದ್ದರು.
ಕೊತಬಾಳದ ಅರುಣೋದಯ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ನಡೆಸಿಕೊಟ್ಟ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜನಮನಸೊರೆಗೊಂಡಿತು.