ಜಾತ್ರೆಯಲ್ಲಿ ಭಕ್ತರಿಗೆ ಮಜ್ಜಿಗೆ ಸರಬತ್ ವಿತರಣೆ

ದೇವದುರ್ಗ,ಏ.೧೭- ತಾಲೂಕಿನ ಗಲಗ ಗ್ರಾಮದ ಆರಾಧ್ಯ ದೈವ ಶ್ರೀಚನ್ನಬಸವೇಶ್ವರ ಜಾತ್ರೆ ನಿಮಿತ್ತ ಭಾನುವಾರ ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮದ ಪ್ರಜ್ಞಾವಂತ ಯುವಕರ ವೇದಿಕೆ ಭಕ್ತರಿಗಾಗಿ ಮಜ್ಜಿಗೆ, ಸರಬತ್, ಶುದ್ಧ ಕುಡಿವ ನೀರು ಒದಗಿಸಿದರು.
ಎರಡು ದಿನಗಳ ಕಾಲ ಜಾತ್ರೆ ಜರುಗಲಿದ್ದು, ಶನಿವಾರ ಮಹಾನೈವಿದ್ಯೆ, ಭಾನುವಾರ ಧೂಳುಗಾಯಿ, ಪಲ್ಲಕ್ಕಿ ಮೆರವಣಿಗೆ ಜಾತ್ರೆ ಜರುಗಿತು. ಜಾತ್ರೆ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀಗಂಗಾಧರಪ್ಪ ಸ್ವಾಮೀಜಿ, ಚನ್ನಬಸವ ತಾತ, ಅಯ್ಯಪ್ಪ ತಾತ ಪೂಜಾರಿ, ದೊಡ್ಡಲಿಂಗಯ್ಯ ತಾತ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಜರುಗಿದವು. ಭಕ್ತರು ಧೂಳುಗಾಯಿ ಅರ್ಪಿಸಿದರೆ, ಇನ್ನುಕೆಲವರು ದೀಡ್‌ನಮಸ್ಕಾರಹಾಕಿ ಭಕ್ತಿಭಾವ ಮೆರೆದರು.
ದೇವಸ್ಥಾನ ಬೆಟ್ಟದ ಮೇಲಿದ್ದು ಸಾವಿರಾರು ಭಕ್ತರು ಸೇರುತ್ತಾರೆ. ಗ್ರಾಮದ ಯುವಕರು ಪ್ರಜ್ಞಾವಂತ ಯುವಕರ ವೇದಿಕೆ ಕಟ್ಟಿಕೊಂಡು ಎರಡು ದಿನ ತಂಪುಪಾನೀಯ ಶಿಬಿರ ಆಯೋಜಿಸಿದ್ದಾರೆ. ಪ್ರತಿವರ್ಷ ವೇದಿಕೆಯಿಂದ ತಂಪುಪಾನೀಯ ಶಿಬಿರ ನಡೆಸಲಾಗುತ್ತಿದೆ. ಪ್ರಜ್ಞಾವಂತರ ಯುವಕರ ವೇದಿಕೆ ಹಲವು ಸಮಾಜಮುಖಿ ಕೆಲಸದ ಮೂಲಕ ಗಮನಸೆಳೆದಿದ್ದಾರೆ. ಈ ಹಿಂದೆ ಸ್ವಚ್ಛತಾ ಅಭಿಯಾನ, ಐತಿಹಾಸಿಕ ಬಾವಿಗಳ ಹೂಳು ತೆಗೆಯುವ ಕೆಲಸ, ಕರೊನಾ ಲಾಕ್‌ಡೌನ್ ಸಮಯದಲ್ಲಿ ಮನೆಮನೆಗೆ ಮಾಸ್ಕ್, ಸಾನಿಟೈಸರ್ ವಿತರಣೆ ಮಾಡುವ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿ ಗ್ರಾಮಸ್ಥರ ಮನಗೆದ್ದಿದ್ದರು.
ಶ್ರೀಗಂಗಾಧರಪ್ಪ ಸ್ವಾಮೀಜಿ, ಶ್ರೀಅಯ್ಯಣ್ಣ ತಾತ ಪೂಜಾರಿ, ಯುವಕರಾದ ಮೌನೇಶ ಅರಸೂರ, ವೈದ್ಯನಾಥ ಅರಸೂರು, ನರಸಣ್ಣ ನಾಯಕ, ಅಕ್ಬರ್, ಶ್ರೀಕಾಂತ, ವೀರೇಶ ಕುಂಬಾರ, ನರಸಪ್ಪ ಇತರರಿದ್ದರು.