ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ  ಮೂಲಭೂತ ಸೌಕರ್ಯ ಒದಗಿಸಲು ಸೂಚನೆ; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ಸಂಜೆವಾಣಿ ವಾರ್ತೆ

ದಾವಣಗೆರೆ,ಫೆ.5; ತಾಲ್ಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ವಾಲ್ಮೀಕಿ ಜಾತ್ರೆ ನಡೆಯಲಿದ್ದು ಜಾತ್ರೆಯನ್ನು ತುಂಬಾ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಡೆಸಿಕೊಡಲು ಎಲ್ಲಾ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.ಅವರು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರಾ ಮಹೋತ್ಸವದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಸೇರಿದಂತೆ ಸಚಿವರು ಮತ್ತು ವಿವಿಧ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಜಾತ್ರೆಗೆ ರಾಜ್ಯ ವಿವಿಧ ಜಿಲ್ಲೆಗಳಿಂದ ಭಕ್ತಾಧಿಗಳು ಇಲ್ಲಿಗೆ ಆಗಮಿಸುವರು.ಜಾತ್ರಾ ಸಂದರ್ಭದಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಇಲ್ಲಿ ಸೇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಜೊತೆಗೆ ಇಲ್ಲಿ  ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ.ಕುಡಿಯುವ ನೀರು; ಶ್ರೀ ಮಠದಲ್ಲಿ ನಾಲ್ಕು ಕೊಳವೆಬಾವಿಗಳಿದ್ದು ಇದರೊಂದಿಗೆ ಹೆಚ್ಚುವರಿಯಾಗಿ ಟ್ಯಾಂಕರ್‍ಗಳನ್ನು ಒದಗಿಸಿ ನಿರಂತರವಾಗಿ ನೀರಿನ ಪೂರೈಕೆ ಮಾಡಲು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದಿಂದ ವ್ಯವಸ್ಥೆ ಮಾಡಬೇಕು ಮತ್ತು ಗ್ರಾಮ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳನ್ನು ಕುಡಿಯುವ ನೀರಿನ ಪೂರೈಕೆ ಉಸ್ತುವಾರಿಗಾಗಿ ನೇಮಕ ಮಾಡಲು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದರು.ನಿರಂತರ ವಿದ್ಯುತ್; ಫೆ.8 ಮತ್ತು 9 ರಂದು ಜಾತ್ರೆ ನಡೆಯಲಿದ್ದು ಜಾತ್ರಾ ಪೂರ್ವದಲ್ಲಿ ಮತ್ತು ಜಾತ್ರಾ ಸಂದರ್ಭದಲ್ಲಿ ಬೆಸ್ಕಾಂನಿಂದ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಭಕ್ತಾಧಿಗಳು ಇಲ್ಲಿಗೆ ರಾತ್ರಿ ಸಮಯದಲ್ಲಿಯು ಬರುವುದರಿಂದ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲು ಬೆಸ್ಕಾಂ ಇಂಜಿನಿಯರ್‍ಗೆ ತಿಳಿಸಿದರು. ಆರೋಗ್ಯ ಇಲಾಖೆ; ಹೆಚ್ಚು ಜನರು ಭಾಗವಹಿಸುತ್ತಿರುವುದರಿಂದ ಆರೋಗ್ಯ ಶಿಬಿರದ ಜೊತೆಗೆ ಸ್ಟಾಲ್‍ಗಳನ್ನು ಹಾಕುವ ಮೂಲಕ ತುರ್ತು ಚಿಕಿತ್ಸೆಯ ಜೊತೆಗೆ ಆಗಮಿಸುವ ಜನರಿಗೆ ಆರೋಗ್ಯದ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸದರು.ಸಾರಿಗೆ; ರಾಜನಹಳ್ಳಿಗೆ ಆಗಮಿಸಲು ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಚುವರಿಯಾಗಿ ಹರಿಹರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಕಲ್ಪಿಸಲು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಂದೋಬಸ್ತ್; ಜಾತ್ರೆಯಲ್ಲಿ ಲಕ್ಷಾಂತರ ಜನರು ಆಗಮಿಸುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಬಹುದು ಮತ್ತು ಕಾರ್ಯಕ್ರಮದ ವೇಳೆ ಜನಸಂದಣಿಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯಮಂತ್ರಿಗಳು ಬಂದು ಹೋದ ನಂತರ ಬಂದೋಬಸ್ತ್ ಕಡಿಮೆಯಾಗಿ ಈ ಹಿಂದೆ ಸಮಸ್ಯೆಯಾಗಿತ್ತು ಎಂದು ಮಠದ ಧರ್ಮದರ್ಶಿಯವರು ಪ್ರಸ್ತಾಪಿಸಿದಾಗ ಜಾತ್ರೆ ಮುಗಿಯುವವರೆಗೂ ಬಂದೋಬಸ್ತ್ ಕೈಗೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಕ್ರಮ ವಹಿಸಲು ತಿಳಿಸಿದರು.