ಜಾತ್ರೆಗಳು ಹಿಂದೂ ಧಾರ್ಮಿಕ ಪರಂಪರೆಯ ಪ್ರತೀಕ

ಸೈದಾಪುರ:ಮಾ.12:ಮಠ-ಮಂದಿರಗಳಲ್ಲಿ ಜರುಗುವ ಜಾತ್ರಾ ಮಹೋತ್ಸವಗಳು ಹಿಂದೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿವೆ ಎಂದು ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.

ಸಮೀಪದ ಕರ್ನಾಟಕ-ತೆಲಂಗಾಣ ರಾಜ್ಯಗಳ ಗಡಿಯಲ್ಲಿರುವ ನೇರಡಗಂ ಶ್ರೀ ಮಠದ ಸಿದ್ಧಲಿಂಗ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಭಾರತೀಯ ಸಂಸ್ಕøತಿ ಹಾಗೂ ಸಂಪ್ರದಾಯಿಕ ಆಚರಣೆಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸುವಲ್ಲಿ ಮಠ-ಮಂದಿರಗಳ ಕೊಡುಗೆ ಬಹುಮುಖ್ಯವಾಗಿದೆ ಎಂದರು.

ಜಾತ್ರೆಯ ನಿಮಿತ್ತ ಶ್ರೀಮಠವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ಭಕ್ತರು ರಥೋತ್ಸವಕ್ಕೆ ನೈಸರ್ಗಿಕ ಹೂಗಳಿಂದ ಅಲಂಕಾರ ಮಾಡಿದ್ದರು. ಜಾತ್ರೆಗೆ ಬಂದ ಎಲ್ಲಾ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.

ಖಾಸಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಆನಂದಭಾರತಿ ಮಾತಾಜಿ ಶ್ರೀಶೈಲಂ, ಶಂಭುಲಿಂಗ ಸ್ವಾಮಿಗಳು ಕಲ್ಲೂರು, ಶಿವಲಿಂಗ ಮಹಾಸ್ವಾಮಿಗಳು ಖೇಳಗಿ, ಅಭಿನವ ಚನ್ನಬಸವ ಸ್ವಾಮಿಗಳು ನಿಡಗುಂದಿ ಕೊಪ್ಪ, ಕ್ಷೀರಲಿಂಗ ಸ್ವಾಮಿಗಳು ಚೇಗುಂಟಾ, ಆದಿತ್ಯಪರಶ್ರೀ ಬಿಜ್ವಾರ, ಶಿವಹಂಸಾರೂಢ ಸ್ವಾಮಿಗಳು ಹೈದ್ರಾಬಾದ್, ಲಿಂಗಪ್ಪ ತಾತಾ ಗುರ್ಲಪಲ್ಲಿ, ಚಂದ್ರಶೇಖರ ದೇವರು ಗದಗ, ರುದ್ರಮುನಿ ದೇವರು ಕಲಬುರಗಿ, ಶಿವಬಸವ ದೇವರು ದಾರವಾಡ, ಗುರುಮಠಕಲ್ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ, ಬಿಜೆಪಿ ಮುಖಂಡ ಕೊಂಡಯ, ಬಿಆರ್‍ಎಸ್ ಮುಖಂಡ ಶಿವರಾಜ ಪಾಟೀಲ್ ಗುರ್ಜಾಲ್ ಸೇರಿದಂತೆ ಅಪಾರ ಭಕ್ತ ಸಮೂಹ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾದರು.