ಜಾತ್ರೆಗಳಿಂದ ಸಾಮಾಜಿಕ ಸಾಮರಸ್ಯ ಸಾಧ್ಯ

ಭಾಲ್ಕಿ:ಎ.4:ಗ್ರಾಮದಲ್ಲಿ ನಡೆಯುವ ಜಾತ್ರೆಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿ ಸಾಮಾಜಿಕ ಸಾಮರಸ್ಯ ಬೆಳೆಸುತ್ತವೆ ಎಂದು ಹಲಬರ್ಗಾ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಾದೇವ ಮಂದಿರದ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ರೆ, ಹಬ್ಬ ಹರಿದಿನಗಳು ಮನುಷ್ಯನಿಗೆ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣುವಂತೆ ಮಾಡುತ್ತವೆ.
ಇಂದು ಮನುಷ್ಯ ಯಾಂತ್ರಿಕವಾಗಿ ಮುಂದುವರೆದರು ಬಹಳ ಒತ್ತಡದಿಂದ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಗ್ರಾಮದ ಎಲ್ಲರೂ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಉಪಯೋಗವಾಗುವಂತಹ ಕಾರ್ಯ ಮಾಡಬೇಕು ಎಂದು ಹೇಳಿದರು.

ಚಲನಚಿತ್ರ ಹಾಸ್ಯ ನಟ ವೈಜಿನಾಥ ಬಿರಾದಾರ ಮಾತನಾಡಿ, ದೈವಭಕ್ತಿ, ದೇವರ ಸಾಮೀಪ್ಯ ಮನುಷ್ಯರನ್ನು ಮಹಾ ಮಾನವರನ್ನಾಗಿ ಮಾಡುತ್ತವೆ ಎಂದು ನುಡಿದರು.

ಸಿದ್ಧಗಂಗಾ ಶ್ರೀ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಗ್ರಾಮದ ಮಹಾದೇವ ದೇವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಗ್ರಾಮದ ಲಕ್ಷ್ಮಿ ಮಂದಿರದಿಂದ ಮಹಾದೇವ ಮಂದಿರದವರೆಗೆ ಹಾವಾಗಿಲಿಂಗೇಶ್ವರ ಶಿವಾಚಾರ್ಯರ ಭವ್ಯ ಮೆರವಣಿಗೆ ನಡೆಯಿತು.

ಮಹಿಳೆಯರು ತಲೆಯ ಮೇಲೆ ಕುಂಭ ಕಳಸ ಹೊತ್ತು ಕೋಲಾಟಕ್ಕೆ ಮೆರಗು ತಂದರು.

ಪ್ರಮುಖರಾದ ಮಲ್ಲಿಕಾರ್ಜುನ ಪ್ರಭಾ, ಸಂತೋಷ ಪೆÇಲೀಸ್ ಪಾಟೀಲ, ರೇವಣಪ್ಪ ಪಾಟೀಲ, ಪ್ರೇಮ ಪ್ರಭಾ, ಜಾಲಿಂದರನಾಥ ಪಾಟೀಲ, ಅಮಿತ್ ಪಾಟೀಲ, ಮಚ್ಚೇಂದ್ರ ಪಾಟೀಲ, ಪ್ರಶಾಂತ, ಸುಭಾಷ, ಮಹಾದೇವ, ಶಂಕರರಾವ್ ಬಿರಾದಾರ, ವಿಜಯಕುಮಾರ ಬಿರಾದಾರ, ಸೋಪಾನರಾವ್ ನಾಯಿಕೋಡೆ ಇದ್ದರು.

ಹಾಸ್ಯನಟ ವೈಜಿನಾಥ ಬಿರಾದಾರ, ಶೇಶಪ್ಪಾ ತಂಡದವರಿಂದ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.