ಜಾತ್ರೆಗಳಿಂದ ಸಂಸ್ಕøತಿ, ಭಕ್ತಿ, ಸೌಹಾರ್ದತೆ ಹೆಚ್ಚಳ : ಡಾ.ಬಸವಲಿಂಗ ಅವಧೂತರು

ಬೀದರ:ಮೇ.21: ತಾಲೂಕಿನ ಶಮಶೀರನಗರ ಗ್ರಾಮದಲ್ಲಿ ಇತ್ತೀಚಿಗೆ ಸಿಂದಗೇರಿ ನಂದಿಬಸವಣ್ಣ ಪಂಚಕಮಿಟಿ ವತಿಯಿಂದ ಒಂದು ವಾರಗಳ ಕಾಲ ಸಿಂದಗೇರಿ ನಂದಿ ಬಸವಣ್ಣನವರ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಸರ್ವಧರ್ಮ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿದ ಮಲ್ಲಯ್ಯ ಗಿರಿ, ದೇಗಲಮಡಿ ಆಶ್ರಮದ ಪೂಜ್ಯಶ್ರೀ ಡಾ.ಬಸವಲಿಂಗ ಅವಧೂತರು ಜಾತ್ರೆಗಳಿಂದ ಜನರಲ್ಲಿ ಸಮಾಜದಲ್ಲಿ ಸಂಸ್ಕøತಿ ಭಕ್ತಿ ಸೌಹಾರ್ದತೆ ಹೆಚ್ಚಾಗುತ್ತದೆ. ಶಾಂತಿ, ನೆಮ್ಮದಿ, ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಜಾತ್ರೆಗಳು ಎಲ್ಲಾ ಧರ್ಮಗಳ ಮಧ್ಯ ಶಾಂತಿ ಸೌಹಾರ್ದತೆಯಿಂದ ಬಾಳಲು ಬಹಳ ಸಹಾಯಕವಾಗುತ್ತವೆ. ಸತ್ಯ ಧರ್ಮ, ಪರಿಪಾಲನೆಯಿಂದ ಮನಸ್ಸು ಪರಿಶುದ್ಧಗೊಳಿಸುತ್ತದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕøತಿ ಮರೆಯಬಾರದು. ಹುಟ್ಟು ಎಷ್ಟೇ ಸಹಜವೋ ಸಾವು ಅಷ್ಟೇ ನಿಶ್ಚಿತ. ಇವೆರಡರ ಮಧ್ಯ ಬದುಕು ಸಮೃದ್ಧಗೊಳಿಸಲು ಮಹಾತ್ಮರು ತೋರಿದ ದಾರಿ ಆಶಾಕಿರಣವಾಗಿದೆ. ನಾವೆಲ್ಲ ಮಹಾತ್ಮರು ತೋರಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕಗೊಳಿಸಬೇಕೆಂದು ಹೇಳಿದರು.

ಸಭೆಯ ನೇತೃತ್ವವನ್ನು ವಹಿಸಿ ಆಶಿರ್ವಚನ ನೀಡಿದ ಡಾ|| ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಸಂಸ್ಥಾನ ಬೇಮಳಖೇಡಾ ದೇವರಿಂದ ನಿರ್ಮಿತವಾದ ವಿಶ್ವವು ಬಹಳ ಅದ್ಭುತ ವೈವಿಧ್ಯತೆಯಿಂದ ಕೂಡಿದ್ದು ಸುಂದರವಾಗಿದೆ. ಮಾನವ ಮನಸ್ಸು ಮಾಡಿದರೆ ಉತ್ತಮ, ಉತ್ಕøಷ್ಟ, ಸುಂದರ ಜೀವನ ಸಾಗಿಸಬಹುದು. ಪರಿಶುದ್ಧವಾದ, ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಅಧ್ಯಾತ್ಮ ಜ್ಞಾನದ ಅರಿವು ಬೇಕು. ಅಧ್ಯಾತ್ಮದ ಜ್ಞಾನ ಬದುಕನ್ನು ವಿಕಾಸಗೊಳಿಸಿ ಸನ್ಮಾರ್ಗದಿಂದ ಕರೆದೊಯ್ಯಲು ಸಹಕಾರಿಯಾಗುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಮಾನವ ಧರ್ಮ ಉಳಿದರೆ ಎಲ್ಲಾ ಧರ್ಮಗಳು ಉಳಿಯಲು ಸಾಧ್ಯವೆಂದು ಹೇಳಿದರು. 
ಬದುಕಿನ ಯಶಸ್ಸಿಗೆ ಲೌಕಿಕ ಜ್ಞಾನ ಹೇಗೆ ಅವಶ್ಯಕವೋ ನೊಂದ ಬೆಂದ ಮನಕ್ಕೆ ಅಧ್ಯಾತ್ಮ ಜ್ಞಾನದ ಅವಶ್ಯಕತೆ ಇದೆ. ಸಮರ ಜೀವನ ಕೊನೆಗೊಂಡು ಅಮರ ಜೀವನದೆಡೆ ಕರೆದುಕೊಂಡು ಒಯ್ಯುವುದೇ ಗುರುವಿನ ಧರ್ಮ. ಎಲ್ಲರಲ್ಲಿ ಧರ್ಮ ಪ್ರಜ್ಞೆ ಸಾಮರಸ್ಯ ಬೆಳೆಸುವುದೇ ಜಾತ್ರೆಯ ಹಾಗೂ ಧರ್ಮದ ಮೂಲ ಗುರಿಯಾಗಿದೆ ಎಂದು ಹೇಳಿದರು. ನಂತರ ಮಹಾರಥೋತ್ಸವಕ್ಕೆ ಡಾ.ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು. ನಂದಿಬಸವಣ್ಣ ರಥೋತ್ಸವ ಸಂದರ್ಭದಲ್ಲಿ ಆಕರ್ಷಕ ಮದ್ದು ಗುಂಡು ಸುಡುವ ಕಾರ್ಯಕ್ರಮ ಜರುಗಿತು. 
ಸಾಂಸ್ಕøತಿಕ ವೈಭವದೊಂದಿಗೆ ರಥೋತ್ಸವ ಮಡಿವಾಳಪ್ಪ ದೇವಸ್ಥಾನದವರೆಗೆ ತೆರಳಿ ಭಕ್ತರ ಜಯಘೋಷಗಳೊಂದಿಗೆ ತೆರಳಿ ಪುನಃ ದೇವಸ್ಥಾನಕ್ಕೆ ಬಂದು ಮುಕ್ತಾಯವಾಯಿತು. ಭಕ್ತರು ಭಕ್ತಿ ಭಾವದಿಂದ ರಥವನ್ನು ಎಳೆದು ಸಂಭ್ರಮಿಸಿ ಪುನೀತರಾದರು. ಮೆರವಣೆಗೆಯಲ್ಲಿ ಪುರವಂತರು ಡೊಳ್ಳು ಭಾಜಾ ಭಜಂತ್ರಿ ವಿವಿಧ ಕಲಾತಂಡಗಳು ಕಲಾ ಪ್ರದರ್ಶನ ತೋರಿದರು. ರಥೋತ್ಸವದಲ್ಲಿ ತೆಲಂಗಾಣ, ಆಂಧ್ರಪ್ರದೇಶ , ಕರ್ನಾಟಕ , ಮಹಾರಾಷ್ಟ್ರ, ವಿವಿಧ ಪ್ರಾಂತ್ಯಗಳಿಂದ ಬಂದ ಭಕ್ತಾದಿಗಳು ಪಾಲ್ಗೊಂಡು ಭಕ್ತಿಯನ್ನು ಮೆರೆದರು. 
ಸಿಂದಗಿ ನಂದಿ ಬಸವಣ್ಣ ಜಾತ್ರಾ ನಿಮಿತ್ಯವಾಗಿ ದೇವಸ್ಥಾನದಲ್ಲಿ ಒಂದು ವಾರ ಕಾಲ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಗದುಗಿನ ಟಿ.ಎಂ.ಪಂಚಾಕ್ಷರಿ ಶಾಸ್ತ್ರಿಗಳು ನಡೆಸಿಕೊಟ್ಟರು. ಅಗ್ನಿ ಪೂಜೆ, ನಂದಿಬಸವಣ್ಣ ಪಲ್ಲಿಕ್ಕಿ ಮೆರವಣಿಗೆ, ಕುಂಭ ಕಳಸ, ರಥಕ್ಕೆ ಕಳಸಾರೋಹಣ, ಸಂಗೀತಾ, ದಿನಾಲೂ ಮಹಾಪೂಜೆ, ರುದ್ರಾಭಿಷೇಕ, ಭಜನೆ ಹಾಗೂ ಪೂಜ್ಯಶ್ರೀಗಳಾದ ಹಲಬರ್ಗಾ ಗ್ರಾಮದ ಹಿರೇಮಠ ಸಂಸ್ಥಾನದ ಹಾವಗಿ ಲಿಂಗೇಶ್ವರ ಶಿವಾಚಾರ್ಯರು ಬ್ಯಾಲಹಳ್ಳಿಯ ಸಿದ್ಧಾರೂಡ ಮಠದ ಪೂಜ್ಯಶ್ರೀಗಳಾದ ನಾಗಲಿಂಗಯ್ಯ ಮಹಾಸ್ವಾಮಿಗಳು ಪ್ರವಚನ ನಡೆಸಿಕೊಟ್ಟರು.  ವೈಜಿನಾಥ ಸಜ್ಜನಶೆಟ್ಟಿ ಹಾಸ್ಯ ನಡೆಸಿಕೊಟ್ಟರು. 
ದಿನಾಲೂ ವೈವಿಧ್ಯವಾಗಿ ಸಾಂಸ್ಥಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನಕ್ಕೆ ಹಾಗೂ ಗ್ರಾಮದ ಬೀದಿಗಳಿಗೆ ತಳಿರು ತೋರಣಗಳಿಂದ ವಿದ್ಯುದೀಪಾಲಂಕಾರ ಮಾಡಿ ಶೃಂಗರಿಸಲಾಯಿತು. ದಿನಾಲೂ ಶರಣಯ್ಯ  ಸ್ವಾಮಿ ಮಠಪತಿ ಹಲಬರ್ಗಾ ಇವರು ಮಹಾಪ್ರಸಾದ ವ್ಯವಸ್ಥೆ ಮಾಡಿದರು. 
ಜಾತ್ರೋತ್ಸವದಲ್ಲಿ ನಂದಿ ಬಸವಣ್ಣ ದೇವಸ್ಥಾನದ ಪೂಜ್ಯ ಸ್ವಾಮಿಗಳಾದ ಚೆನ್ನಮಲ್ಲಯ್ಯ ಸ್ವಾಮಿ, ಪಂಚಕಮಿಟಿಯ ಅಧ್ಯಕ್ಷರಾದ ಶಿವರಾಜ ಪಾಟೀಲ, ವೀರಶೆಟ್ಟಿ ಪಾಟೀಲ, ಸೋಮನಾಥ ಮೈಲೂರು, ಶಾಂತಕುಮಾರ ಸ್ವಾಮಿ ಬಾವಗಿ, ಭೀಮರಾವ ಹೂಗಾರೆ, ಧೂಳಪ್ಪಾ ತೋರಣ, ರಾಜು ಗೂನಳ್ಳಿ, ಗಿರಿರಾಜ ಪಾಟೀಲ, ಸಾಯಿನಾಥ ಪಾಟೀಲ, ಯೋಗೇಂದ್ರ ಯದಲಾಪುರೆ, ಸುಭಾಷ ಕೋಳಿ, ವೀರಶೆಟ್ಟಿ ಕೋಳಾರ, ನಾಗಣ್ಣಾ ಕೋಳಿ, ನೀಲಕಂಠಯ್ಯ ಸ್ವಾಮಿ, ಮಲ್ಲಪ್ಪ ಗೂನಳ್ಳಿ, ದಶರಥ ಕೋಳಿ, ಮಲ್ಲಪ್ಪ ಅಡೆಪ್ಪಾ, ಮಲ್ಲಪ್ಪಾ ಬಸಪ್ಪಾ, ರಾಜಪ್ಪಾ ಕೋಳಿ, ಸಾಯಿನಾಥ ಆರ್. ಪಾಟೀಲ, ವೀರಯ್ಯ ಸ್ವಾಮಿ, ಮಲ್ಲಪ್ಪ ಚಂದ್ರಪ್ಪಾ, ರಾಜಕುಮಾರ ಪಾಂಚಾಳ, ಕೇದಾರ ಪಾಟೀಲ ಹಾಗೂ ವಿವಿಧ ಗ್ರಾಮಗಳಿಂದ, ರಾಜ್ಯಗಳಿಂದ ಬಂದ ಭಕ್ತಾದಿಗಳು ಭಾಗವಹಿಸಿದರು.