ಲಕ್ಷ್ಮೇಶ್ವರ,ಏ8: ಪಟ್ಟಣದ ಪುರಾತನ ಪ್ರಸಿದ್ದ ಕೋಡಿಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ದವನದ ಹುಣ್ಣಿಮೆ ದಿನ ಜಾತ್ರಾ ಮಹೋತ್ಸವ ಅಪಾರ ಭಕ್ತ ಸಮೂಹ ಪಾಲ್ಗೊಳ್ಳುವಿಕೆಯಲ್ಲಿ ಶೃದ್ಧಾ, ಭಕ್ತಿಯಿಂದ ನೆರವೇರಿತು.
ಸಂಪ್ರದಾಯದಂತೆ ಪಟ್ಟಣದ ಕಲಾವಿದ ರಮೇಶ ತೊರಗಲ್ ಅವರ ಮನೆಯಲ್ಲಿ ಬಣ್ಣದಿಂದ ಅಲಂಕರಿಸಿದ್ದ ದೇವಿಯ ಮೂರ್ತಿಯನ್ನು ಎತ್ತಿನ ಬಂಡಿಯಲ್ಲಿ ವಾದ್ಯಮೇಳ, ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಮಾರ್ಗ ಮಧ್ಯದಲ್ಲಿ ಮುತೈದೆಯರು ಉಡಿ ತುಂಬುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಈ ವೇಳೆ ಪಟ್ಟಣದ ಪ್ರಮುಖರು, ಹಿರಿಯರು, ಭಕ್ತವೃಂದ ಪಾಲ್ಗೊಂಡಿದ್ದರು.
ಸಂಜೆ ಅದ್ದೂರಿ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ನೆರವೇರಿತು. ರಥೋತ್ಸವ ಸಂದರ್ಭದಲ್ಲಿ ಸೇರಿದ್ಧ ಭಕ್ತ ಸಮೂಹ ದೇವಿಯ ನಾಮಸ್ಮರಣೆ, ಉದೋ ಉದೋ ಉದ್ಘಾರ ಘೋಷಣೆಗೈದರು. ರಥಕ್ಕೆ ಉತ್ತತ್ತಿ, ಬೆಲ್ಲದ ಚೂರು, ಬಾಳೆಹಣ್ಣು ಎಸೆದು ಭಕ್ತಿಯಿಂದ ಬೇಡಿದರು. ಇತ್ತೀಚಿಗೆ ವಿವಾಹ ಬಂಧನಕ್ಕೊಳಗಾದ ನವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥ ನೋಡಲು ಆಗಮಿಸಿದ್ದು ಕಂಡು ಬಂದಿತಲ್ಲದೇ ಜಾತ್ರೆಯ ವಿಶೇಷ ಮಂಡಕ್ಕಿ, ಮಿರ್ಚಿ ಸವಿದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.