ಜಾತ್ರಾ ಕಾರ್ಯಕ್ರಮ


ನವಲಗುಂದ,ಮಾ.28: ಇತಿಹಾಸ ಪ್ರಸಿದ್ದ ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಯಮನೂರು ಗ್ರಾಮದ ರಾಜಾಭಾಗ ಸವಾರ ಊರ್ಫ್ ಚಾಂಗದೇವರ ಜಾತ್ರೆಯು ವಿಜೃಂಭಣೆಯಿಂದ ಜರುಗಲಿದೆ.
ಮಾ. 29ರಂದು ಗಂಧಾಭಿಷೆಕ(ಸಂದಲ್), ಮಾ. 30ರಂದು ಉರೂಸ್ ಜರುಗುತ್ತದೆ. ಅಭಿಷೇಕದ ದಿನ ಸಂತರು ನಂದಾದೀಪ ಬೆಳಗಿಸಲು ಬೆಣ್ಣೆಹಳ್ಳದ ನೀರು ತೆಗೆದುಕೊಂಡು ಹೋಗುತ್ತಾರೆ. ನಂತರ ಚಾಂಗದೇವರ ದೇವಸ್ಥಾನದಲ್ಲಿ ದೀಪ ಬೆಳಗಿಸುವ ಮುಖಾಂತರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ.
ಹಿಂದೂ ಪದ್ಧತಿಯ ಪ್ರಕಾರ ಪೂಜೆ, ಅಭಿಷೇಕ ನಡೆದರೆ, ಮುಸ್ಲಿಂ ಸಂಪ್ರದಾಯದಂತೆ ಫಾತಿಹಾ ಒಂದೇ ಸಮಯಕ್ಕೆ ಎರಡೂ ಪ್ರಾರ್ಥನೆಗಳು ನಡೆಯುವುದು ಕ್ಷೇತ್ರದ ಭಾವೈಕತೆಗೆ ಸಾಕ್ಷಿಯಾಗಿದೆ.
ಚಾಂಗದೇವ ಮಹಾರಾಜರ ದೇವಸ್ಥಾನದಿಂದ 2 ಕಿಮೀ ದೂರವಿರುವ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡಿದರೆ ಮೈಮೇಲೆ ಇರುವ ಯಾವುದೇ ಚರ್ಮರೋಗವಾದರು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ದೇವರ ದರ್ಶನಕ್ಕೇ ಹೋಗುವ ಪೂರ್ವದಲ್ಲಿ ಭಕ್ತರು ಈ ಬೆಣ್ಣೆ ಹಳ್ಳದಲ್ಲಿ ಸ್ನಾನ ಮಾಡುತ್ತಾರೆ.
ಹಳ್ಳಕ್ಕೆ ಬಂದ ಭಕ್ತರು ಬಾಟಲ್‍ಗಳಲ್ಲಿ ಹಳ್ಳದ ನೀರನ್ನು ತುಂಬಿಕೊಂಡು ಹೋಗುತ್ತಾರೆ. ಭಕ್ತರು ಹಸ್ತ, ಕುದುರೆ, ಸರಗಿ ಕಾಣಿಕೆ, ಸಕ್ಕರೆ ಇತ್ಯಾದಿಗಳನ್ನು ಚಾಂಗದೇವರ ಗದ್ದುಗೆಯ ಮೇಲೆ ಇಟ್ಟು ಹರಕೆ ತೀರಿಸುತ್ತಾರೆ.
ಇನ್ನೂ ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಮಹರಾಷ್ಟ್ರ, ತೆಲಂಗಾಣ ಹಾಗೂ ಹೈದರಾಬಾದ್ ನಿಂದಲೂ ಭಕ್ತರು ಆಗಮಿಸಿ ವಾರಗಟ್ಟಲೆ ಇಲ್ಲಿಯೇ ಉಳಿಯುತ್ತಾರೆ. ಚಾಂಗದೇವರ ದರ್ಶನ ಪಡೆಯಲು ಕಿಮೀ ಗಟ್ಟಲೆ ಲಕ್ಷಾಂತರ ಭಕ್ತರು ಸರದಿ ಸಾಲಿನಲ್ಲಿ ನಿಂತಿರುತ್ತಾರೆ.
ಗ್ರಾಮ ಪಂಚಾಯತಿಯಿಂದ ವ್ಯವಸ್ಥೆ
ಜಾತ್ರೆಗೆ ಬರುವ ಭಕ್ತರಿಗೆ ಗ್ರಾಮ ಪಂಚಾಯತಿಯಿಂದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬೆಣ್ಣೆಹಳ್ಳದಿಂದ ಬರುವ ಮಾರ್ಗ ಮಧ್ಯ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪೆÇಲೀಸ್ ಚೌಕಿ ವ್ಯವಸ್ಥೆ ಮಾಡಿದೆ.