ಜಾತಿ ರಾಜಕಾರಣ ಬಿಜೆಪಿಯ ಚುನಾವಣಾ ಗಿಮಿಕ್: ಹರೀಶ್

ಮಂಗಳೂರು, ನ.೨೧- ಜಾತಿ ರಾಜಕಾರಣ ಮಾಡುವುದು ಬಿಜೆಪಿಯ ಚುನಾವಣಾ ಗಿಮಿಕ್ ಹೊರತು ಕಾಂಗ್ರೆಸ್ ಇಂತಹ ಕಾರ್ಯ ಯಾವುತ್ತೂ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಹೆಸರು ನಾಮಕರಣಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರಿಸಿದ್ದಾರೆ. ಹಾಗಿರುವಾರ ರಾಜ್ಯ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸೂಚಿಸಿ ಕೇಂದ್ರ ಸರ್ಕಾರಕ್ಕೆ ಹೆಸರು ಕಳುಹಿಸಬೇಕು. ಇಲ್ಲವೇ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕು. ಇಂತಹ ಯಾವುದೇ ಕೆಲಸ ವನ್ನು ಮಾಡದೆ ಬಿಜೆಪಿ ಜಾತಿ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸುವ ಬಗ್ಗೆ ಸ್ಥಳೀಯ ಮಳವೂರು ಗ್ರಾಮ ಪಂಚಾಯಿತ್‌ನಲ್ಲಿ ನಾಲ್ಕು ವರ್ಷ ಗಳ ಹಿಂದೆ ನಿರ್ಣಯಿಸಿದ್ದು, ಅದನ್ನು ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಟ್ಟಿದೆ. ಅಲ್ಲಿಂದ ರಾಜ್ಯ ಸರ್ಕಾರಕ್ಕೆ ತೀರ್ಮಾನವನ್ನು ಕಳುಹಿಸಲಾಗಿದೆ. ಆದರೆ ರಾಜ್ಯ ಸರಕಾರಕ್ಕೆ ಕೋಟಿ ಚೆನ್ನಯ ಹೆಸರಿಡುವ ಮನಸ್ಸಿಲ್ಲ . ಅದಕ್ಕೆ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಿದೆ ಎಂದು ಹರೀಶ್ ಕುಮಾರ್ ದೂರಿದರು. ಯಾವುದಾದರೂ ಚುನಾವಣೆ ಸಮೀಪಿಸುತ್ತಿರುವಾಗಲೇ ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಗಿಮಿಕ್ ಆರಂಭಿಸುತ್ತದೆ. ಈಗಾಗಲೇ ವಿವಿಧ ಜಾತಿಗಳಿಗೆ ಪ್ರಾಧಿಕಾರ ಅಥವಾ ನಿಗಮ ರಚಿಸಲಾಗಿದೆ. ಸುಮಾರು ೨೦ಕ್ಕೂ ಅಧಿಕ ಪ್ರಾಧಿಕಾರಗಳಿಗೆ ಅಧ್ಯಕ್ಷರೇ ಇಲ್ಲ. ನಾರಾಯಣಗುರು ಜಯಂತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಅದೇ ರೀತಿ ಪುತ್ತೂರು ಪಡುಮಲೆಯಲ್ಲಿ ಕೋಟಿ ಚೆನ್ನಯ ಜನ್ಮಸ್ಥಾನ ಪುನರುಜ್ಜೀವನಕ್ಕೆ ಹಣ ಕಾಸು ನೆರವು ನೀಡಿದ್ದು ಆಗಿನ ಶಾಸಕಿ ಶಕುಂತಳಾ ಶೆಟ್ಟಿ, ಔಷಧವನ ಸ್ಥಾಪನೆಗೂ ಮಾಜಿ ಸಚಿವ ರಮಾನಾಥ ರೈ ನೆರವು ನೀಡಿದ್ದರು ಎಂದು ಹರೀಶ್ ಕುಮಾರ್ ಹೇಳಿದರು. ಮಂಗಳೂರು ವಿಮಾನ ನಿಲ್ದಾಣದ ಗುತ್ತಿಗೆ ಅವಧಿಯನ್ನು ಸಾಮಾನ್ಯವಾಗಿ ೩೦ ವರ್ಷಕ್ಕೆ ನೀಡುವುದು ಕ್ರಮ. ಆದರೆ ಇಲ್ಲಿ ೫೦ ವರ್ಷದ ವರೆಗೆ ಗುತ್ತಿಗೆ ಅವಧಿ ನೀಡಲಾಗಿದೆ. ಇದು ನಿಯಮಬಾಹಿರವಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಇದೆ. ರಾಜ್ಯ ಹಾಗೂ ಕೇಂದ್ರ ದಲ್ಲಿ ಒಂದೇ ಪಕ್ಷದ ಸರ್ಕಾರ ಇದೆ. ಇಲ್ಲಿನ ಸಂಸದರು ಪಕ್ಷದ ರಾಜ್ಯಾಧ್ಯಕ್ಷರು ಆಗಿದ್ದಾರೆ. ಆದರೂ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಲು ಸಾಧ್ಯವಾಗುತಿತಿಲ್ಲ ಎಂದರೆ ಏನರ್ಥ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಅಬ್ದುಲ್ ರವೂಫ್, ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್, ಎ.ಸಿ.ವಿನಯರಾಜ್, ಅನಿಲ್ ಕುಮಾರ್, ನೀರಜ್‌ಪಾಲ್, ನಝೀರ್ ಬಜಾಲ್ ಇದ್ದರು.