ಜಾತಿ ಮತವನ್ನು ಮೀರಿ ಮಠ ಮಾನ್ಯಗಳು ಕೆಲಸ ಮಾಡಲಿ: ದೇವಾಪೂರ ಶ್ರೀ

ಕೆಂಭಾವಿ:ಜ.5:ಮಠಗಳಿಂದ ಮಠಾಧೀಶರಿಂದ ನೊಂದವರ ನೋವಿನಿಂದ ಬಂದವರ ಕಣ್ಣೀರು ಒರೆಸುವ ಕೆಲಸವಾಗಬೇಕು ಧರ್ಮದಿಂದ ಮಾತ್ರ ಮಾನವನ ಕಲ್ಯಾಣ ಸಾಧ್ಯ
ಧಾರ್ಮಿಕ ಕೇಂದ್ರಗಳು ಹಿಂದೂ ಪರಂಪರೆ, ಸನಾತನ ಸಂಸ್ಕೃತಿ ಸಂಸ್ಕಾರದ ಮೂಲ ಸ್ಥಾನ. ಇಲ್ಲಿ ಸಿಗುವ ಎಲ್ಲ ಧಾರ್ಮಿಕ ನೀತಿ ಪಾಠ ಧರ್ಮೋದ್ಧಾರಕ್ಕೆ ಕಾರಣವಾಗುತ್ತದೆ ಎಂದು ದೇವಾಪುರದ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಸಮೀಪ ಮುದನೂರ ಗ್ರಾಮದ ಸದ್ಗುರು ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ, ಶ್ರೀ ಕಂಠಿ ಹನುಮಾನ ದೇವಸ್ಥಾನದ ೨೨ ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀಗಳ ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಪೂಜಾ ಮಂದಿರಗಳಲ್ಲಿ ನಡೆಯುವ ಧರ್ಮಾಧರಿತ ಕಾರ್ಯಕ್ರಮಗಳಲ್ಲಿ ನಮ್ಮ ಮಕ್ಕಳು ಪಾಲ್ಗೊಳ್ಳುವಂತೆ ಮಾಡುವುದು ಹಿರಿಯರ ಕರ್ತವ್ಯ. ಭಾರತ ಸಂಸ್ಕçತಿ ಆಧಾರದಲ್ಲಿ ಮುನ್ನೆಡೆಯುತ್ತಿದೆ. ಭಾರತ ದೇಶ ಸ್ವರ್ಗಕ್ಕೆ ಸಮಾನವಾದುದು. ಪ್ರಸಕ್ತ ಕಾಲಘಟ್ಟದಲ್ಲಿ ಪಾಶ್ಚಾತ್ಯ ಜೀವನ ಶೈಲಿಯಿಂದಾಗಿ ಭಾರತೀಯ ಸಂಸ್ಕೃತಿ ಮುಂದಿನ ಜನಾಂಗಕ್ಕೆ ಉಳಿಯುವದು ಕಷ್ಟಕರವಾಗಿದೆ. ಇದಕ್ಕಾಗಿ ಮನೆಯಿಂದಲೆ ಸಂಸ್ಕೃತಿಯ ಪಾಠವನ್ನು ತಮ್ಮ ಮಕ್ಕಳಿಗೆ ನೀಡುವ ಅವತ್ಯವಿದೆ. ಬೇಡುವಾತ ಗುರುವಲ್ಲ ಅಂತೇ ಬೇಡಿಸಿಕೋಳ್ಳುವಾತ ಭಕ್ತನಲ್ಲ ಧರ್ಮದಿಂದ ಮಾತ್ರ ಉದ್ದಾರ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷ ಬಸನಗೌಡ ಯಡಿಯಾಪುರ, ದಾಸಿಮಯ್ಯನವರ ಪುಣ್ಯ ಭೂಮಿ ಮುದನೂರ ಗ್ರಾಮದ ಹೆಸರನ್ನು ಕಂಠಿ ಮಠದ ಪೂಜ್ಯರು ಇನ್ನೂ ಎತ್ತರಕ್ಕೆ ಕೊಂಡ್ಯಯ್ದಿದ್ದಾರೆ. ಬಾಲ ಬ್ರಹ್ಮಚಾರಿಯಾಗಿ, ತಪಸ್ವಿಯಾಗಿ ಈ ಭಾಗದ ಜನರ ಉದ್ಧಾರಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಧರ್ಮ ನಶಿಸುತ್ತಿರುವ ಸಂದರ್ಭದಲ್ಲಿ ಧರ್ಮಸಭೆಗಳನ್ನು ಹಮ್ಮಿಕೊಂಡು ಭಾರತೀಯ ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಷ.ಬ್ರ.ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭೀಮರಾಯ ಸಾಹು ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಂಗನಗೌಡ ಪಾಟೀಲ ವಜ್ಜಲ, ಡಿ ಸಿ ಪಾಟೀಲ.ಬಸನಗೌಡ ಪಾಟೀಲ.ಬಿ.ವಿ ಪಾಟೀಲ್ ಕೃಷ್ಣರೆಡ್ಡಿ ಹೊಸಮನಿ , ವೀರೇಶ ರೆಡ್ಡಿ, ಚೆನ್ನಪ್ಪಗೌಡ, ನಾಡಗೌಡ ಕಾಚಾಪುರ ಸೇರಿದಂತೆ ಇತರರಿದ್ದರು.
ವಡಗೇರಿ ಗ್ರಾಮದ ಮಲ್ಲಯ್ಯ ಸ್ವಾಮಿ ವಡಗೇರಿ ೫ ದಿನಗಳ ಕಾಲ ಪ್ರವಚನ ನಡೆಸಿಕೊಟ್ಟರು. ಬಸವರಾಜ ಬಂಟನೂರ ಹಾಗೂ ಯಮನೇಶ ಯಾಳಗಿ ಸಂಗೀತ ಸೇವೆ ನೀಡಿದರು. ಶಿಕ್ಷಕ ದೇವಿಂದ್ರಪ್ಪ ಕರಡಕಲ್ ನಿರೂಪಿಸಿದರು. ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿದರು. ಹರೀಶ ಕಳಂಕರ್ ವಂದಿಸಿದರು.