ಜಾತಿ ಬಿಟ್ಟು ವ್ಯಕ್ತಿಗೆ ಗೌರವ ಕೊಡಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.21:- ಜಾತಿ ಮನಸ್ಥಿತಿ ಬಿಟ್ಟು ಮನುಷ್ಯನನ್ನು ಪ್ರೀತಿ, ಕರುಣೆಯಿಂದ ಕಾಣಬೇಕು. ವ್ಯಕ್ತಿ ಗೌರವ ಕೊಡಬೇಕು ಎಂದು ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಬೌದ್ಧ ಬಿಕ್ಕು ಆನಂದ ಹೇಳಿದರು.
ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ವೈಶಾಖ ಬುದ್ಧಪೂರ್ಣಿಮೆ ಆಚರಣೆ ಮತ್ತು ಮಹತ್ವ ಕುರಿತು ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ವ್ಯಕ್ತಿಯ ಮನಸ್ಸಿನಲ್ಲಿ ಯುದ್ಧಗಳು ಹುಟ್ಟುತ್ತವೆ. ವೈರವನ್ನು ವೈರದಿಂದ ಗೆಲ್ಲಲಾಗದು. ಪ್ರೀತಿ, ಮಮತೆಯಿಂದ ಜಗತ್ತನ್ನು ಗೆಲ್ಲಲು ಸಾಧ್ಯ. ಬುದ್ಧ ಅಶೋಕ ಅದನ್ನು ತೋರಿಸಿಕೊಟ್ಟಿದ್ದಾರೆ. ಬುದ್ಧನ ಧ್ಯಾನ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಗೌತಮ ಬುದ್ಧರನ್ನು ದೇವರು, ಗುರು ಎಂದುಕೊಳ್ಳದೇ ಬುದ್ಧನನ್ನಾಗಿಯೇ ಪರಿಭಾವಿಸಬೇಕು. ಬುದ್ಧನ ಮೂಲ ಬೋಧನೆಯಾದ ಥೇರಾವಾದ ಅನುಸರಿಸಬೇಕು ಎಂದು ತಿಳಿಸಿದರು.
ತ್ರಿಸರಣ, ಪಂಚಶೀಲ, ಧ್ಯಾನ ಪದ್ಧತಿಯನ್ನು ಪಾಲಿಸಬೇಕು. ವಾದ ವಿವಾದವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ಜ್ಞಾನವಾಗಿ ನೋಡಬೇಕು. ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸುತ್ತಲೇ ಸತ್ಯವನ್ನು ಪರಿಶೀಲಿಸಬೇಕು. ಪ್ರಶ್ನಿಸಬೇಕು ಎಂದರು.
ಧರ್ಮಾಧಾರಿತ ಭಯದ ಸಂಕೋಲೆಯಿಂದ ಬುದ್ಧ ಜನರನ್ನು ಬಿಡುಗಡೆಗೊಳಿಸಿದರು. ಮನುಷ್ಯ ತನ್ನನ್ನು ತಾನು ಅರಿತುಕೊಂಡರೆ ಮಾತ್ರ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಸಾರಿದರು. ಅಲ್ಲದೇ ದೇವರು, ಸೃಷ್ಟಿಕರ್ತ, ಸ್ವರ್ಗ, ನರಕ ಸೇರಿದಂತೆ ಕಾಲ್ಪನಿಕ ಚಿಂತನೆಗಳಿಗೆ ಆಸ್ಪದ ಕೊಡಲಿಲ್ಲ ಎಂದರು.
ಜೀವನ ಕಲೆ, ಜಾಗೃತ ಮನೋಭಾವವನ್ನು ಧ್ಯಾನದಿಂದ ಕರಗತಗೊಳಿಸಿಕೊಳ್ಳಬಹುದು. ಯಾರು ಬುದ್ಧತ್ವವನ್ನು ಪಡೆಯುವರೊ ಅವರನ್ನು ಬೋಧಿಸತ್ವ ಎನ್ನುತ್ತಾರೆ. ಇದನ್ನು ಅಂಬೇಡ್ಕರ್ ಸಾಧಿಸಿದ್ದರು ಎಂದು ಹೇಳಿದರು.
ಕೇಂದ್ರದ ನಿರ್ದೇಶಕ ಪೆÇ್ರ.ಜೆ.ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪೆÇ್ರ.ಎಸ್.ನರೇಂದ್ರ ಕುಮಾರ್, ಜ್ಞಾನಾನಂದ ಭಂತೇಜಿ, ಪ್ರಜ್ಞಾನಂದ ಭಂತೇಜಿ ಹಾಜರಿದ್ದರು.