ಜಾತಿ ಪ್ರಮಾಣ ಪತ್ರ ನೀಡಲು ನಿರ್ಲಕ್ಷ್ಯ ಕ್ರಮಕ್ಕೆ ಆಗ್ರಹ

ಭಾಲ್ಕಿ:ಜ.30:ತಾಲೂಕಿನ ಸಿದ್ದೇಶ್ವರ ಗ್ರಾಮದ ಪರಿಶಿಷ್ಟ ಸಮುದಾಯದ ಜನರಿಗೆ ಜಾತಿ ಆದಾಯ ಪ್ರಮಾಣ ಪತ್ರ ವಿತರಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಗ್ರಾಮ ಲೆಕ್ಕಿಗ ಮತ್ತು ಕಂದಾಯ ನಿರೀಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾದಿಗ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಾದಿಗ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಭಟ್ಟಾರೆ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳು ಸೂಕ್ತ ಮಾಹಿತಿ ಪಡೆಯದೇ ವಿನಾಕಾರಣ ಅರ್ಜಿದಾರರು ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಸಲ್ಲಿಸುತ್ತಿರುವ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ.
ಕೂಡಲೇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಸಂರ್ದಭದಲ್ಲಿ ಸಂಘಟನೆ ಪ್ರಮುಖರಾದ ಮಲ್ಲಿಕಾರ್ಜುನ ನೇಳಗೆ, ಅಂಬಾದಾಸ ಆಲೂರೆ, ಪ್ರದೀಪ ಹೆಗಡೆ ಇದ್ದರು.