ಜಾತಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಲಕ್ಷ್ಮೇಶ್ವರ,ಮಾ17 : ಬಾಲೇಹೊಸೂರ ಗ್ರಾಮದ ಗಂಟಿಚೋರ ಸಮುದಾಯದವರು ತಮಗೆ ಎಸ್‍ಸಿ ಜಾತಿ ಪ್ರಮಾಣ ಪತ್ರ ಕೊಡುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದೆ ಶಾಲಾ ಮಕ್ಕಳೊಂದಿಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಘಟನೆ ಗುರುವಾರ ಜರುಗಿತು.
ಸತ್ಯಾಗ್ರಹ ನಿರತರಲ್ಲಿ ವಕೀಲ ಅನಂತ ಕಟ್ಟಿಮನಿ, ಶಿವರಾಜ ಕಡೆಮನಿ ಮಾತನಾಡಿ,ನಮ್ಮ ಜನಾಂಗ 4/5ದಶಕಗಳಿಂದ ಎಸ್‍ಸಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದೆ. ಆದರೆ ಇದೀಗ ಯಾವುದೇ ಪ್ರಾಧಿಕಾರ ಮತ್ತು ನ್ಯಾಯಾಲಯದ ಯಾವುದೇ ಆದೇಶವಿಲ್ಲದಿದ್ದರೂ ಹಾಗೂ ನಮ್ಮ ಹಿರಿಯರ ಜಾತಿ ಪತ್ರ ಎಸ್‍ಸಿ ಎಂದಿದ್ದರೂ ಕಳೆದ ಕೆಲ ವರ್ಷದಿಂದ ತಹಸೀಲ್ದಾರರು ನಮಗೆ ಹೊಸದಾಗಿ ನಮ್ಮ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ಶೈಕ್ಷಣಿಕವಾಗಿ ಮತ್ತು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಜಾತಿ ಪತ್ರ ಕೊಡುವಾಗ ಕೇವಲ ಶಾಲಾ ದಾಖಲಾತಿಯೊಂದನ್ನೆ ಪರಿಗಣಿಸದೆ ಆ ಜಾತಿಗೆ ಸಂಬಂಧಿಸಿದ ಆಚಾರ-ವಿಚಾರ,ಪೂರ್ವಿ ಇತಿಹಾಸ, ದಾಖಲಾತಿಗಳನ್ನು ಪರಿಗಣಿಸಿ ಜಾತಿ ಪ್ರಮಾಣ ಪತ್ರವನ್ನು ಕೊಡಬೇಕೆಂದು ಸರ್ಕಾರದ ಸುತ್ತೋಲೆ ಇದೆ. ಅಲ್ಲದೇ ಈ ಬಗ್ಗೆ ಜಿಲ್ಲಾ ಜಾತಿ ಪರಿಶೀಲನಾ ಸಭೆಯ ವರದಿಯಂತೆ ಜಿಲ್ಲಾಧಿಕಾರಿಗಳ ಒಪ್ಪಿಗೆಯ ಆದೇಶ ಇದ್ದಾಗ್ಯೂ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ನಮಗೆ ಜಾತಿ ಪ್ರಮಾಣ ಪತ್ರವನ್ನು ಕೊಡದೆ ಸಂವಿಧಾನಾತ್ಮಕ ಹಕ್ಕನ್ನು ಕಸಿಯುತ್ತಿದ್ದಾರೆ. ಇದರಿಂದ ನಮಗೆ ತುಂಬಾ ನಷ್ಟ, ಮಾನಸಿಕ ನೋವುಂಟಾಗಿದೆ. ಆದ್ದರಿಂದ ನಮ್ಮ ನ್ಯಾಯಯುತವಾದ ಬೇಡಿಕೆ ಈಡೇರುವವರೆಗೂ ಪ್ರಾಣ ಹೋದರೂ ಸರಿ ಹೋರಾಟ ಮುಂದುವರೆಸುತ್ತೇವೆ. ನಮ್ಮ ಹೋರಾಟಕ್ಕೆ ಗದಗ, ಹಾವೇರಿ, ಧಾರವಾಡ ಸೇರಿ ವಿವಿಧ ಜಿಲ್ಲೆಗಳಿಂದ ಗಂಟಿಚೋರ್ ಜನಾಂಗದವರು ಬೆಂಬಲಕ್ಕೆ ಬಂದಿದ್ದಾರೆ ಎಂದು ತಹಸೀಲ್ದಾರ ಕ್ರಮದ ವಿರುದ್ಧ ಹರಿಹಾಯ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಆನಂದ ಶೀಲ ಅವರು ಗಂಟಿಚೋರ ಜನಾಂಗದವರಿಗೆ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪಂಚರ ಸಮಕ್ಷಮ ಮಾಹಿತಿ ಪಡೆದು, ಕೂಲಂಕುಷವಾಗಿ ಚರ್ಚಿಸಿ ಪ್ರಮಾಣ ಪತ್ರ ಕೊಡಲಾಗುವುದು ಮಾ.30 ರವರೆಗೆ ಕಾಲಾವಕಾಶ ನೀಡಬೇಕೆಂದು ಹೇಳಿದರು. ಈ ವೇಳೆ ಕರ್ನಾಟಕ ರಾಜ್ಯ ಬುಡಕಟ್ಟು- ಅಲೆಮಾರಿ ಜನಾಂಗದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಾಡೆ ತಹಸೀಲ್ದಾರರೊಂದಿಗೆ ಚರ್ಚಿಸಿ ಪಡೆದ ಕಾಲಾವಕಾಶದಲ್ಲಿ ತಮಗೆ ನ್ಯಾಯ ಕಲ್ಪಿಸಬೇಕೆಂದು ಮತ್ತು ಸದ್ಯಕ್ಕೆ ಹೋರಾಟದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಈ ವೇಳೆ ಗದಗ ದಲಿತ ಸಂಘದ ಶರೀಪ ಬಿಳಿಯಲೆ, ಆನಂದ ಶಿಂಗಾಡೆ, ಅನೀಲ ಕಾಳೆ, ಮುತ್ತು ಬಿಳಿಯಲೆ, ಸಿದ್ಧಪ್ಪ ನೆನಗನಹಳ್ಳಿ, ಕೇಶವ ಕಟ್ಟಿಮನಿ, ಲೊಕೇಶ ಕಟ್ಟಿಮನಿ, ಬಲರಾಮ ಗುಡಗೇರಿ, ಶ್ರೀಕಾಂತ ಹಲಗುರ್ಕಿ, ರಂಗನಾಥ ದೊಡ್ಡಮನಿ, ಶರಣಪ್ಪ ಕೊಪ್ಪಳ, ಪರಶುರಾಮ ಕಡೆಮನಿ, ಫಕ್ಕೀರೇಶ ಶಿಳ್ಳಿಕ್ಯಾತರ, ಶ್ಯಾಂತಪ್ಪ ಕಟ್ಟಿಮನಿ (ಸಿಳ್ಳಿಕ್ಯಾತ ಸಮುದಾಯ), ಶ್ರೀಕಾಂತ್ ಹಲಕುರ್ಕಿ(ಹುಬ್ಬಳ್ಳಿ), ಪರಶುರಾಮ ಕಡೆಮನಿ(ಹನಮರಹಳ್ಳಿ), ರಂಗನಾಥ ದೊಡ್ಡಮನಿ(ಹುಬ್ಬಳ್ಳಿ) ಮಂಜುನಾಥ ಹರಕೇರಿ (ಹುಬ್ಬಳ್ಳಿ) ಭರತರಾಜ ಕಟ್ಟಿಮನಿ(ನರಗುಂದ) ಸೇರಿ ಬಾಲೇಹೊಸೂರ, ಗದಗ, ನರಗುಂದ, ಹನಮರಹಳ್ಳಿ, ಹುಬ್ಬಳ್ಳಿ ಭಾಗದ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. ಕಂದಾಯ, ಪೊಲೀಸ್ ಸಿಬ್ಬಂದಿ ಇದ್ದರು.