ಜಾತಿ ಗಣತಿ ವರದಿ ಬಿಡುಗಡೆಗೆ ಹೆಚ್ ಡಿಕೆ ಅಡ್ಡಿ: ಸಿದ್ದು ಆರೋಪ

ಬೆಂಗಳೂರು,ಸೆ.25- ಸಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗದ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರನ್ನು ಹೆದರಿಸಿದ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಜಾತಿ ಗಣತಿ ವರದಿ ಬಿಡುಗಡೆ ಆಗದಂತೆ ನೋಡಿಕೊಂಡರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಗಂಬೀರ ಆರೋಪ ಮಾಡಿದ್ದಾರೆ..

ಕುಮಾರಸ್ವಾಮಿ ಅವರಿಗೆ ಹೆದರಿ ಪುಟ್ಟರಂಗಶೆಟ್ಟಿ ವರದಿ ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,‌ ಇದ್ದುದನ್ನು ಇದ್ದ ಹಾಗೆ ಹೇಳಿದರೆ ಕುಮಾರಸ್ವಾಮಿಯವರಿಗೆ ಕೋಪ. ಸಿದ್ದರಾಮಯ್ಯ ಕೂತು ವರದಿ ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ ಎಂದು ದೂರಿದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿದ್ದ ಜಾತಿ ಸಮೀಕ್ಷೆ ವರದಿ ತಾವು ಮುಖ್ಯಮಂತ್ರಿ ಆಗಿದ್ದಾಗ ಪೂರ್ಣಗೊಂಡಿರಲಿಲ್ಲ.‌
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪೂರ್ಣವಾಯ್ತು.‌ ಆಗ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. ವರದಿ ಪೂರ್ಣವಾಗಿದೆ ಎಂದು ಕುಮಾರಸ್ವಾಮಿಯವರಿಗೆ ಮಾಹಿತಿ ನೀಡಿದರು. ಆದರೆ, ವರದಿ ಬಿಡುಗಡೆ ಮಾಡಲು ಅವರಿಗೆ ಅವಕಾಶ ಕೊಡಲಿಲ್ಲ ಎಂದು ದೂರಿದ್ದಾರೆ.

ಜಾತಿ ಗಣತಿ ವರದಿ ಎಲ್ಲ ಜಾತಿ, ಜನಾಂಗದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯುವ ವರದಿ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಇಲ್ಲ.‌ಆದರೂ ವರದಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದರು.

ಜಾತಿ ಸಮಾವೇಶ ಹಕ್ಕಿಗಾಗಿ

ತಮ್ಮ ಹಕ್ಕುಗಳಿಗಾಗಿ ಹಿಂದುಳಿದ ವರ್ಗದವರು ಜಾತಿ ಸಮಾವೇಶಗಳನ್ನು ನಡೆಸುವುದು ಅಪರಾಧವಲ್ಲ.
ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ಮುಖ್ಯಮಂತ್ರಿ ಆಗಿದ್ದಾಗ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದುಳಿದವರು ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ ತಪ್ಪಲ್ಲ.‌ ಹಿಂದುಳಿದವರೇ ಸಂಘಟಿತರಾಗಿ ಸಮ್ಮೇಳನ ಮಾಡಬೇಕು. ಕೆಲವರು ಹೆಸರಿಗೆ ಮಾತ್ರ ಬಸವಣ್ಣನ ಹೆಸರು ಹೇಳುತ್ತಾರೆ. ಆದರೆ, ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಾರೆ‌ ಎಂದರು.

ಇವನಾರವ ಇವನಾರವ, ಇವ ನಮ್ಮವ‌ ಇವ ನಮ್ಮವ ಎಂದು ವಚನ ಹೇಳುತ್ತಾರೆ. ಆದರೆ, ಪಕ್ಕದಲ್ಲಿ ನಿಂತು ನೀವು ಯಾವ ಜಾತಿ ಎಂದು ಕೇಳುತ್ತಾರೆಸಂವಿಧಾನ ಅತ್ಯಂತ ಒಳ್ಳೆಯದು. ಆದರೆ ಸಂವಿಧಾನ ಒಳ್ಳೆಯವರ ಕೈಯಲ್ಲಿರಬೇಕು. ಆಗ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಮಡಿವಾಳ ಸಮಾಜಕ್ಕೆ‌ ಎಂಎಲ್‌ಸಿ ಸ್ಥಾನ ನೀಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.