ಜಾತಿ ಗಣತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ನವದೆಹಲಿ, ಏ. ೨೪- ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿಗಣತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೇ. ೯೦ ರಷ್ಟು ದೇಶದ ಜನರು ಜಾತಿಗಣತಿ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಜಾತಿ ಗಣತಿ ನಡೆಸುತ್ತೇವೆ ಎಂದು ಹೇಳಿದರು.
ಜಾತಿ ಗಣತಿಯ ಮೂಲಕ ಈ ಅನ್ಯಾಯವನ್ನು ತಡೆಯಬೇಕೆಂದು ತಾವು ಕರೆ ಕೊಟ್ಟ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ತಮ್ಮ ವಿರುದ್ಧ ತಿರುಗಿಬಿದ್ದರು ಎಂದು ಕಿಡಿಕಾಡಿದರು.
ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡದೆ ದೇಶದ ದೊಡ್ಡ ಉದ್ಯಮಿಗಳಿಗೆ ಸಹಾಯ ಮಾಡುತ್ತಿದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಯಿತು. ಆದರೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಹಿಂದುಳಿದ ಸಮುದಾಯದ ಯಾರೊಬ್ಬರು ಪಾಲ್ಗೊಳ್ಳಲಿಲ್ಲ. ನೂತನ ಸಂಸತ್ ಕಟ್ಟಡ ನಿರ್ಮಾಣದಲ್ಲೂ ಇದೇ ರೀತಿಯಾಯಿತು. ರಾಮಮಂದಿರ, ಸಂಸತ್ ಭವನ ಉದ್ಘಾಟನೆಯಲ್ಲಿ ಯಾವುದೇ ದಲಿತ, ಆದಿವಾಸಿ ಜನಾಂಗದವರು ಪಾಲ್ಗೊಳಲಿಲ್ಲ ಎಂದು ರಾಹುಲ್ ಹರಿಹಾಯ್ದಿರು.
ಸಾವಿತ್ರಿ ಬಾಯಿ ಫುಲೆ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದೇಶಕ್ಕಾಗಿ ರಾತ್ರಿ -ಹಗಲು ಶ್ರಮಿಸಿದ್ದಾರೆ. ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದಾರೆ. ಆದರೆ ಅವರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಆದ್ದರಿಂದ ಇತಿಹಾಸ ಪರಿಷ್ಕರಿಸುವ ಅಗತ್ಯವಿದೆ ಎಂದು ರಾಹುಲ್ ಹೇಳಿದರು.
ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇತಿಹಾಸವನ್ನು ಅಳಿಸುವುದೇ ಬಿಜೆಪಿಯವರ ಮುಖ್ಯ ಧ್ಯೇಯವಾಗಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.