ಜಾತಿಪತ್ರ ವಿವಾದ 1ನೇ ವಾರ್ಡು ಚುನಾವಣೆ ರದ್ದಿಗೆ ಕಾಂಗ್ರೆಸ್ ಒತ್ತಾಯ

ಬಳ್ಳಾರಿ, ಏ.17: ನಗರ ಪಾಲಿಕೆಯ ಒಂದನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಹೆಚ್.ಎಂ.ಕಿರಣ್ ಕುಮಾರ್ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕ್ರಮಬದ್ಧವಾಗಿಲ್ಲದ ಕಾರಣ ಇದರ ಪರಿಶೀಲನೆ ನಡೆಯುವವರೆಗೆ ಚುನಾವಣೆ ರದ್ದು ಮಾಡಬೇಕೆಂದು ಕೆಪಿಸಿಸಿಯ ಪರಿಶಿಷ್ಟ ಜಾತಿ ವಿಭಾಗದ ನಗರ ಜಿಲ್ಲಾ ಅಧ್ಯಕ್ಷ ಎಂ.ವಿ.ಎರಕುಲಸ್ವಾಮಿ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಕಿರಣ್ ಕುಮಾರ್ ಅವರು ವೀರಶೈವ ಜಂಗಮ ಜಾತಿಗೆ ಸೇರಿದವರು ಹಾಗಾಗಿ ಅವರು ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಹೀಗಿರುವಾಗ ಅವರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿರುವುದು ಸರಿಯಲ್ಲ.
ಅವರಿಗೆ ಈ ರೀತಿ ಪ್ರಮಾಣಪತ್ರ ನೀಡಿರುವುದು, ಯಾರು, ಯಾವ ತಾಲೂಕು ಕಛೇರಿ, ಎಂಬುದು ತಿಳಿಯಬೇಕಿದೆ. ನಿನ್ನೆ ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ಮಾಡಿದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ.
ಅದಕ್ಕಾಗಿ ಕಿರಣ್ ಕುಮಾರ್ ಅವರ ಜಾತಿ ಪ್ರಮಾಣ ಪತ್ರದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡುವವರೆಗೆ ಚುನಾವಣೆ ರದ್ದು ಮಾಡಬೇಕು, ಇಲ್ಲದಿದ್ದರೆ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದಿದ್ದಾರೆ.