ಜಾತಿಪಟ್ಟಿಗೆ ಲಾಳಗೊಂಡ ಸಮಾಜ ನಿರಂತರ ಹೋರಾಟಕ್ಕೆ ಸಂದ ಜಯ

ಸಿಂಧನೂರು,ಏ.೦೧- ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಲಾಳಗೊಂಡ ಜಾತಿಯನ್ನು ಜಾತಿಪಟ್ಟಿಯ ೨ಡಿ ಪ್ರವರ್ಗಕ್ಕೆ ಸೇರಿಸಿದ್ದು ನಮ್ಮ ಸಮಾಜದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಲಾಳಗೊಂಡ ಸಮಾಜದ ಸಿಂಧನೂರು ನಗರ ಘಟಕದ ಅಧ್ಯಕ್ಷ ದೊಡ್ಡನಗೌಡ ಯರಡೋಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಲಾಳಗೊಂಡ ಸಮಾಜವನ್ನು ೨ಡಿ ಪ್ರವರ್ಗದಡಿಯಲ್ಲಿ ಸೇರ್ಪಡೆ ಮಾಡಲು ಸಮಾಜದ ರಾಜ್ಯಾಧ್ಯಕ್ಷ ಬಸನಗೌಡ ಹರವಿ, ರಾಯಚೂರು ಜಿಲ್ಲಾಧ್ಯಕ್ಷ ವೀರಭದ್ರಪ್ಪಗೌಡ ಆಲ್ದಾಳ ಸೇರಿದಂತೆ ಸಮಾಜದ ಪ್ರಮುಖರು ಸರಕಾರದ ಮೇಲೆ ನಿರಂತರವಾದ ಒತ್ತಡ ಹಾಕುತ್ತಲೇ ಬಂದಿದ್ದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ, ಎಂಎಲ್‌ಸಿ ವೈ.ಎಂ.ಸತೀಷ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ, ಸಿರಗುಪ್ಪಾ ಶಾಸಕ ಸೋಮಲಿಂಗಪ್ಪ, ಕನಕಗಿರಿ ಶಾಸಕ ಬಸವರಾಜ ದಡೇಸ್ಗೂರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಮ್ಮ ಸಮಾಜದ ಹೋರಾಟಕ್ಕೆ ಕೈ ಜೋಡಿಸಿ ಜಾತಿ ಪಟ್ಟಿಯಲ್ಲಿ ಸೇರಿಸಲು ಅವಿರತವಾಗಿ ಶ್ರಮಿಸಿದ್ದಾರೆ ಎಂದಿದ್ದಾರೆ.
ರಾಜ್ಯ ಸರಕಾರ ಲಾಳಗೊಂಡ ಸಮಾಜವನ್ನು ಅಧಿಕೃತವಾಗಿ ಪ್ರವರ್ಗ ೨ಡಿ ಅಡಿಯಲ್ಲಿ ಸೇರ್ಪಡೆ ಮಾಡಿರುವದಕ್ಕೆ ಸಮಾಜದ ಬಾಂದವರಲ್ಲಿ ಹರ್ಷ ತಂದಿದೆ. ಮುಖ್ಯಮಂತ್ರಿಗಳಿಗೆ, ಸಂಪುಟ ಸಹದ್ಯೋಗಿಗಳಿಗೆ, ಸಂಸದ, ಶಾಸಕರಿಗೆ, ಸಮಾಜದ ಮುಖಂಡರಿಗೆ ಅಭಿನಂದನೆ ತಿಳಿಸಿದ್ದಾರೆ.