ಜಾತಿ,ಧರ್ಮ ಬದಿಗೊತ್ತಿ ರಾಮನ ಸ್ಮರಣೆ-ಸುರೇಶ್‌ಬಾಬು

ಕೋಲಾರ,ಏ.೨೨: ಜಾತಿ,ಧರ್ಮದ ಎಲ್ಲೆ ಮೀರಿ ರಾಮನ ಸ್ವರಣೆಗೆ ಒಂದಾಗುವ ನಮ್ಮ ಸಮಾಜ ಆ ಮಹಾಪುರುಷನ ಆದರ್ಶ ಪಾಲಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.
ನಗರದ ಪೇಟೆಚಾಮನಹಳ್ಳಿಯಲ್ಲಿ ಯುವಶಕ್ತಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಮನವಮಿ ಹಬ್ಬದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ದೇಶವನ್ನು ಕೋವಿಡ್ ಮಹಾಮಾರಿ ಆವರಿಸಿದೆ, ೨ನೇ ಅಲೆ ಭೀಕರವಾಗಿದೆ, ಇಂತಹ ಸಂದರ್ಭದಲ್ಲಿ ಕಾರ್ಯಕ್ರಮ ಮಾಡುವವರು ಮಾಸ್ಕ್ ಧರಿಸದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಸೋಂಕು ತಡೆಗೆ ಯುವಕರು ಕೈಜೋಡಿಸಿ, ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದು ಮನವಿ ಮಾಡಿದರು.
ಸೋಂಕು ತಡೆಗೆ ಸರ್ಕಾರ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದೆ, ಆದರೂ ನೀವು ರಾಮನ ಮೇಲಿನ ಭಕ್ತಿಯಿಂದ ಆಚರಿಸುತ್ತಿದ್ದೀರಿ ಆದರೆ ಮಾರ್ಗಸೂಚಿ ಪಾಲಿಸಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತಿದ್ದು ಮಾತ್ರ ಬೇಸರ ತಂದಿದೆ ಎಂದರು.
ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ ಧರ್ಮವೆಂಬ ಕಟ್ಟಳೆಗಳನ್ನು ಬದಿಗೊತ್ತಿ ಈ ದಿನದಲ್ಲಿ ಮಜ್ಜಿಗೆ ಪಾನಕಗಳನ್ನು ಹಂಚುವ ಮೂಲಕ ಈ ನಾಡಿನ ಸೌಹಾರ್ದತೆಯನ್ನು ಮೆರೆಯಬೇಕು ಇಡೀ ವಿಶ್ವವೇ ಒಂದು ಕುಟುಂಬದಂತೇ ಭಾವಿಸಬೇಕು ಎಂದರು.
ಯುವ ಶಕ್ತಿ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಯುವಶಕ್ತಿ ಸುಬ್ಬು, ಜನಸೇವೆ ಮಾಡುವುದರ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು, ಕೋವಿಡ್ ಮಾರ್ಗಸೂಚಿ ಪಾಲಿಸಿ ಸರ್ಕಾರದೊಂದಿಗೆ ಪ್ರತಿಯೊಬ್ಬರೂ ಸಹಕರಿಸಿ ಕೋವಿಡ್ ಮಾರಿಯನ್ನು ಓಡಿಸಬೇಕು ಎಂದರು.
ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸಲು ಧ್ಯಾನ ಅತ್ಯಂತ ಅತ್ಯವಶ್ಯಕ. ಧ್ಯಾನದ ಮೂಲಕ ನಮ್ಮನ್ನು ನಾವು ಶುದ್ಧಗೊಳಿಸಿಕೊಳ್ಳಬೇಕು. ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಮಾಡುವುದೇ ಮಾನವ ಧರ್ಮ ಎಂದರು.
ಚಿತ್ರನಟ ಕರಾಟೆ ಶ್ರೀನಿವಾಸ್ ಮಾತಾನಾಡಿ, ಧಾರ್ಮಿಕ ನಂಬಿಕೆಗಳ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಈ ದಿನ ರಾಮಜಪ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ತಿಳಿಸಿದರು.
ಅಂಬೇಡ್ಕರ್ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಕೀಲ ಮಂಜುನಾಥ ಮಾತಾನಾಡಿ ಈ ಕೊರೋನ ಸಂದರ್ಭದಲ್ಲಿ ಬಹಳಷ್ಟು ಜಾಗರೂಕತೆಯಿಂದ ಹಬ್ಬವನ್ನು ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿ ಸತ್ಯ ನ್ಯಾಯ ಧರ್ಮದ ಮೂಲಕ ನಾವು ಮನುಷ್ಯರಾಗಬೇಕು. ಪ್ರತಿಯೊಬ್ಬರೂ ಸಹಕಾರ ಮನೋಭಾವನೆಯ ಹೃದಯವಂತಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯುವಶಕ್ತಿ ಸೇವಾ ಸಮಿತಿಯ ಸದಸ್ಯರುಗಳಾದ ಹಾರೋಹಳ್ಳಿ ಕಲ್ಯಾಣ್,ಹಾರೋಹಳ್ಳಿ ಕೇಶವ, ಅಮ್ಮೇರಹಳ್ಳಿ ಮುರಳಿ, ಹೆಮೇಶ್, ರಂಜಿತ್, ಸಂದೀಪ್, ದರ್ಶನ್ ಮತ್ತು ಸುತ್ತಮುತ್ತಲಿನ ಜನರು ಪಾಲ್ಗೊಂಡಿದ್ದರು.