ಜಾತಿ,ಜಾತಿಗಳ ಮಧ್ಯೆ ವಿಷ ಬಿತ್ತುವ ಬಿಜೆಪಿ ಖರ್ಗೆ ಟೀಕೆ

Mallikarjuna kagre offering flowers on the occassion of jajivaram birthday celebration at kpcc office 


ಬೆಂಗಳೂರು, ಏ. ೫- ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ, ಜಾತಿಜಾತಿಗಳ ನಡುವೆ ದ್ವೇಷ ಮೂಡಿಸಿ, ದೇಶ ವಿಭಜನೆ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ನ ಸಿದ್ಧಾಂತ ವಿಷವಿದ್ದಂತೆ, ಈ ವಿಷ ದೇಶವನ್ನು ವ್ಯಾಪಿಸುವ ಮೊದಲು ಜನ ಎಚ್ಚೆತ್ತುಕೊಳ್ಳಬೇಕು, ಬಿಜೆಪಿಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ದೇಶದ ಮಾಜಿ ಉಪ ಪ್ರಧಾನಿ ದಿ. ಜಗಜೀವನ್ ರಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯವರು ದೇಶವನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಯಾವುದನ್ನೂ ಇವರು ಒಪ್ಪಲ್ಲ. ದೇಶ ಒಡೆಯುವುದಷ್ಟೆ ಇವರ ಅಜೆಂಡಾ ಎಂದು ಹರಿಹಾಯ್ದರು.
ಆರ್ ಎಸ್ ಎಸ್ ನ ಸಿದ್ದಾಂತ ವಿಷ ಇದ್ದಂತೆ, ವಿಷವನ್ನು ಪರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಒಂದು ತೊಟ್ಟು ಕುಡಿದರೆ ಸಾಕು, ಸಾಯುತ್ತೇವೆ. ಹಾಗಾಗಿ ಹೋಗಲಿ ಎಂದು ಅವಕಾಶ ಕೊಟ್ಟರೆ ಎಲ್ಲಾ ಮುಗಿದಂತೆ ಎಂದರು.
ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯಲ್ಲೇ ಭ್ರಷ್ಟರು ತುಂಬಿಕೊಂಡಿದ್ದಾರೆ. ಇವರೇನೂ ಸತ್ಯಹರಿಶ್ಚಂದ್ರನ ಮಕ್ಕಳಾ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಹೇಳುವುದು ಒಂದು – ಮಾಡುವುದು ಇನ್ನೊಂದು, ೭೫ ವರ್ಷ ವಯಸ್ಸಾಯಿತು ಎಂದು ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಇವರುಗಳನ್ನೆಲ್ಲಾ ಮೂಲೆಗೆ ಕೂರಿಸಿದರು. ಆದರೆ ಕೇರಳದಲ್ಲಿ ೮೫ ವರ್ಷದ ಶ್ರೀಧರನ್ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಅನ್ನು ಬಿಜೆಪಿ ನೀಡಿದೆ. ಇದು ಬಿಜೆಪಿ ನಾಯಕರ ಸಿದ್ದಾಂತ ಎಂದು ಕಿಡಿಕಾರಿದರು.
ಬಿಜೆಪಿಯವರ ದುರಾಡಳಿತ, ದೇಶ ವಿಭಜನೆಯ ತಂತ್ರ, ಭ್ರಷ್ಟಾಚಾರ, ಎಲ್ಲವನ್ನೂ ಜನ ಬಹಳ ದಿನ ಸಹಿಸಿಕೊಳ್ಳಲ್ಲ. ಇಂದಲ್ಲಾ ನಾಳೆ ಬಿಜೆಪಿಗೆ ಬುದ್ದಿ ಕಲಿಸುತ್ತಾರೆ ಎಂದರು.
ದೇಶದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಹಸಿರು ಕ್ರಾಂತಿಯನ್ನು ಜಾರಿಗೆ ತಂದವರು. ೧೯೭೧ ರಲ್ಲಿ ರಕ್ಷಣಾ ಸಚಿವರಾಗಿದ್ದವರು. ಭಾರತ – ಪಾಕ್ ಯುದ್ದದ ವೇಳೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಬಾಂಗ್ಲಾಗೆ ಸ್ವತಂತ್ರ ಸಿಗುವಂತೆ ನೋಡಿಕೊಳ್ಳುವಲ್ಲಿ ಇವರ ಕೊಡುಗೆ ದೊಡ್ಡದು ಎಂದರು.
ಈ ಸಂದರ್ಭದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ, ಹಲವು ಮುಖಂಡರು ಉಪಸ್ಥಿತರಿದ್ದರು.