ವೈಜ್ಞಾನಿಕ ಜಾತಿಗಣತಿಗೆ ವೀರಶೈವರ ಆಗ್ರಹ

ದಾವಣಗೆರೆ:ಡಿ,೨೪- ಕಾಂತರಾಜ ಆಯೋಗ ವರದಿ ನೀಡಿರುವ ಜಾತಿಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ ನೇ ಮಹಾ ಅಧಿವೇಶನವು ವೈಜ್ಞಾನಿಕ ಜಾತಿಗಣತಿ ನಡೆಸಬೇಕು ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಿದೆ.
ನಗರದ ಎಂಬಿಎಂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ ನೇ ಮಹಾ ಅಧಿವೇಶನದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ನಡೆದ ಈ ಅಧಿವೇಶನದಲ್ಲಿ ಸಮಾಜದ ಒಗ್ಗಟ್ಟಿಗೆ ಕರೆ ಕೊಟ್ಟಿದೆ.ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ವೀರಶೈವ ಲಿಂಗಾಯತ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದಲ್ಲಿದ್ದು, ಅವೈಜ್ಞಾನಿಕವಾಗಿರುವ ಜಾತಿಗಣತಿ ವರದಿ ಅಂಗೀಕರಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಪಂಗಡಗಳನ್ನು ಸೇರ್ಪಡೆ ಮಾಡಬೇಕು. ರಾಜ್ಯ ಸರ್ಕಾರವು ನಿರ್ಧಾರ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿ ಜಾರಿಗೊಳಿಸಬೇಕು ಎಂದು ಮಹಾಸಭಾ ಆಗ್ರಹಿಸಿದೆ.ವೀರಶೈವ ಲಿಂಗಾಯತರು ಒಗ್ಗಟ್ಟಾಗಬೇಕು. ಭಿನ್ನಮತ ಮರೆತು ಒಂದಾಗಬೇಕು. ಸಮಾಜದ ಏಳಿಗೆಗೆ ಶ್ರಮಿಸಬೇಕು. ಸಮಾಜಕ್ಕೆ ಸಂಬಂಧಿಸಿದಂತೆ ಪಕ್ಷ ಬೇಧ ಮರೆತು ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ವೀರಶೈವ ಲಿಂಗಾಯತ ಮಹಾಸಭಾವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ. ಈ ನಿಟ್ಟಿನಲ್ಲಿ ಸಭಾಕ್ಕೆ ಎಲ್ಲರೂ ಸಹಕಾರ ಕೊಡುವಂತೆ ಮನವಿ ಮಾಡಲಾಯಿತು.
ವೀರಶೈವ ಲಿಂಗಾಯತ ಸಮಾಜದ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ನಮ್ಮಲ್ಲಿಯೂ ಬಡವರಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಮಹಾಧಿವೇಶನವು ತೀರ್ಮಾನಿಸಿದೆ.