ಜಾತಿಗಣತಿ ವರದಿ ಸಲ್ಲಿಸಿದರೆ ಪರಿಶೀಲನೆ:ಸಿಎಂ

ಬೆಳಗಾವಿ. ಅ. 3- ಜಾತಿಗಣತಿ ವರದಿ ಸಲ್ಲಿಸಲು ಹಿಮದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದ್ದು, ವರದಿ ನೀಡಿದರೆ ಪರಿಶೀಲಿಸ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಜಾತಿ ಗಣತಿ ವರದಿ ಜಾರಿಗೆ ಒತ್ತಡಗಳು ಬರುತ್ರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಂದ ಈ ಹೇಳಿಕೆ ಹೊರಬಿದ್ದಿದೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿ್ಎ ಮಾತನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಅವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದು, ವರದಿ ತಯಾರು ಮಾಡಿದ್ದರು. ವರದಿ ಸಲ್ಲಿಸಲು ಹೋದಾಗ ಅದನ್ನು ಅವರು ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡಿಲ್ಲ. ಈಗಿನ ಕಾರ್ಯದರ್ಶಿಗಳ ಬಳಿ ಸಹಿ ಮಾಡಿಸಿ ಅವರು ಸಲ್ಲಿಸಬೇಕು ಎಂದು ವಿವರಿಸಿದರು.
ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದು. ಆಗ ಕಾಂತರಾಜು ಆವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ನಂತರ ಸಮ್ಮಿಶ್ರ ಸರ್ಕಾರ ಇರುವಾಗ ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿಯನ್ನು ಪಡೆಯಲಿಲ್ಲ. ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗಡೆಯವರನ್ನು ಬಿಜೆಪಿ ಸರ್ಕಾರ ನೇಮಿಸಿತ್ತು. ಅವರಿಗೆ ವರದಿಯನ್ನು ಸಲ್ಲಿಸುವಂತೆ ತಿಳಿಸಿಲಾಗಿದೆ, ಆದರೆ ಕೊಟ್ಟಿಲ್ಲ ಎಂದರು.
ಶಿವಮೊಗ್ಗ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.