ಜಾತಿಗಣತಿ ವರದಿ ಜಾರಿಗೆ ಕೂಗು

ಬೆಂಗಳೂರು, ಅ. ೩- ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೆ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಡಗಳು ಹೆಚ್ಚಿದ್ದು, ರಾಜ್ಯಸರ್ಕಾರವು ಈ ಹಿಂದೆ ನಡೆಸಿದ್ದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ರಾಜಕೀಯವಾಗಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಲಿರುವ ಈ ಜಾತಿ ಗಣತಿ ವರದಿಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದ್ದು, ಜಾತಿ ಗಣತಿ ವರದಿ ಬಿಡುಗಡೆಗೆ ಈಗಾಗಲೇ ಪ್ರಬಲ ಸಮುದಾಯಗಳು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿರುವುದರಿಂದ ಮುಖ್ಯಮಂತ್ರಿಗಳು ಜೇನುಗೂಡಿನಂತಿರುವ ಜಾತಿ ಗಣತಿ ವರದಿ ಬಿಡುಗಡೆಗೆ ಕೈ ಹಾಕುತ್ತಾರೆಯೇ ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಆಸಕ್ತಿ ವಹಿಸಿ ಅವರು ರಾಜ್ಯದಲ್ಲಿ ಜಾತಿ ಗಣತಿಗೆ ಆದೇಶಿಸಿದ್ದರು. ೨೦೧೬ರ ವೇಳೆಗೆ ವರದಿ ಪೂರ್ಣಗೊಂಡಿತ್ತಾದರೂ ಆ ಸಂದರ್ಭದಲ್ಲಿ ವರದಿಯ ಕೆಲ ಅಂಶಗಳು ಸೋರಿಕೆಯಾಗಿ ವರದಿ ಬಿಡುಗಡೆಗೆ ಪ್ರಬಲ ಸಮುದಾಯಗಳು ವಿರೋಧಿಸಿದ್ದವು. ಹಾಗಾಗಿ, ಜಾತಿ ಗಣತಿ ವರದಿ ಬಿಡುಗಡೆಯಾಗದೆ ಧೂಳು ಹಿಡಿದಿತ್ತು,. ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿಯಾದ ಹೆಚ್.ಡಿ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ವರದಿ ಬಿಡುಗಡೆಗೆ ಆಸಕ್ತಿ ತೋರಲಿಲ್ಲ ಹಾಗಾಗಿ ಜಾತಿ ಗಣತಿ ವರದಿ ಬಿಡುಗಡೆ ನೆನೆಗುದಿಗೆ ಬಿದ್ದಿತು.
ಆಗಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜ್ ಅವರು ಜಾತಿಗಣತಿ ವರದಿಯನ್ನು ಆಗಿನ ಮುಖ್ಯಕಾರ್ಯದರ್ಶಿ ಅವರಿಗೆ ಸಲ್ಲಿಸಿದ್ದರು,. ಸರ್ಕಾರದ ಮಟ್ಟದಲ್ಲಿ ಈ ವರದಿ ಪರಿಶೀಲನಾ ಹಂತದಲ್ಲಿಯೇ ಇದೆ. ಈ ವರದಿಗೆ ಆಗಿನ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ಅಧ್ಯಕ್ಷರೊಬ್ಬರೇ ಸಹಿ ಹಾಕಿದ್ದಾರೆ ಎಂದು ಹೇಳಲಾಗಿತ್ತು.೧೯೯೨ರ ಬಳಿಕ ದೇಶದಲ್ಲಿ ಜಾತಿವಾರು ಗಣತಿ ನಡೆದಿರಲಿಲ್ಲ. ಅಂತಹುದೊಂದು ಪ್ರಯತ್ನವನ್ನು ಸಿದ್ದರಾಮಯ್ಯರವರ ಸರ್ಕಾರ ಮಾಡಿತ್ತು. ಇದಕ್ಕೆ ೧೬೨ ಕೋಟಿ ರೂ.ಗಳನ್ನು ವೆಚ್ಚ ಮಾಡಿತ್ತು.ಈ ಹಿಂದೆ ನಡೆಸಿದ ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ. ಆ ವರದಿಯನ್ನು ಸರ್ಕಾರ ಒಪ್ಪ ಬಾರದು ಎಂದು ಕೆಲ ಜಾತಿ ಸಮುದಾಯದ ನಾಯಕರು ಆಗ್ರಹಿಸಿದ್ದರು. ಜಾತಿ ಗಣತಿ ವರದಿಗೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ನಂತರ ಅಧಿಕಾರ ಹಿಡಿದ ಸರ್ಕಾರಗಳು ಜಾತಿ ಗಣತಿ ವರದಿಯ ಬಗ್ಗೆ ಹೆಚ್ಚಿನ ಗಮನ ಹೊಡದೆ ನಿರ್ಲಕ್ಷ್ಯ ಧೋರಣೆ ತಾಳಿದ್ದವು. ಹಾಗಾಗಿ ಜಾತಿ ಗಣತಿ ವರದಿ ಧೂಳು ಹಿಡಿದಿತ್ತು. ಈಗ ಈ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವುದಾಗಿ ಚುನಾವಣಾ ಸಂದರ್ಭದಲ್ಲಿ ಭರವಸೆಯನ್ನೂ ನೀಡಲಾಗಿತ್ತು. ಅದರಂತೆ ಈಗಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಿಗೆ ಸರ್ಕಾರ ವರದಿಯ ಬಗ್ಗೆ ಸೂಕ್ತ ಶಿಫಾರಸ್ಸು ಮಾಡುವಂತೆಯೂ ಸೂಚಿಸಿತ್ತು ಎಂದು ಹೇಳಲಾಗಿದೆ. ಹಾಗಾಗಿ ಆಯೋಗ ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡುವ ಅಗತ್ಯವಿದ್ದು, ಸದ್ಯದಲ್ಲೇ ಹಿಂದುಳಿದ ವರ್ಗಗಳ ಆಯೋಗ ಜಾತಿ ಗಣತಿ ಬಗ್ಗೆ ಸರ್ಕಾರಕ್ಕೆ ಅಧಿಕೃತವಾಗಿ ವರದಿಯೊಂದನ್ನು ಸಲ್ಲಿಸಲಿದೆ ಎಂದೂ ಆಯೋಗದ ಮೂಲಗಳು ಹೇಳಿವೆ.
ಸದ್ಯದ ಪರಿಸ್ಥಿತಿಯಲ್ಲಿ ಜಾತಿ ಗಣತಿ ವರದಿ ಬಿಡುಗಡೆ ತಡವಾಗಬಹುದು. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಸದ್ಯಕ್ಕೆ ಜಾತಿ ಗಣತಿ ವರದಿ ಬಿಡುಗಡೆ ದೂರದ ಮಾತು ಎಂದು ಹೇಳಲಾಗುತ್ತಿದೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ಹಿಂದೆ ಸೋರಿಕೆಯಾದ ಜಾತಿ ಗಣತಿ ವರದಿಯಲ್ಲಿ ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜನಸಂಖ್ಯೆ ಪರಿಶಿಷ್ಟ ಜಾತಿ ಮುಸ್ಲಿಂ ಸಮುದಾಯಕ್ಕಿಂತ ಕಡಿಮೆ ಎಂಬ ಅಂಶಗಳು ಬಹಿರಂಗಗೊಂಡಿದ್ದವು. ಹಾಗಾಗಿ, ಜಾತಿ ಗಣತಿ ವರದಿ ಸರಿಯಿಲ್ಲ. ವೈಜ್ಞಾನಿಕವಾಗಿ ಇದು ನಡೆದಿಲ್ಲ ಎಂದು ಕೆಲ ಸಮುದಾಯದ ಮುಖಂಡರುಗಳು ನ್ಯಾಯಾಲಯಕ್ಕೆ ಮೊರೆ ಹೋಗಿ ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರದ್ದು, ರಾಜ್ಯಸರ್ಕಾರಕ್ಕೆ ಇಲ್ಲ ಎಂಬ ವಾದವೂ ಕೇಳಿ ಬಂದಿತ್ತು. ಹಾಗೇಯೇ ಹಿಂದುಳಿನ ವರ್ಗದ ಸಮುದಾಯದ ಕೆಲ ಮುಖಂಡರು ಜಾತಿ ವರದಿ ಜಾರಿಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಎರಡೂ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲಿ ಬಾಕಿ ಇದೆ. ಹಾಗಾಗಿ ಜಾತಿ ಗಣತಿ ವಿಚಾರದಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಎಲ್ಲರ ಚಿತ್ತ ಹರಿದಿದೆ.
ಕಾಂಗ್ರೆಸ್ ಅಧಿಕಾರ: ಹೆಚ್ಚಿದ ಒತ್ತಡ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಜಾತಿಗಣತಿ ವರದಿಯನ್ನು ಸರ್ಕಾರ ಒಪ್ಪಿ ಬಹಿರಂಗಗೊಳಿಸಬೇಕು ಎಂಬ ಒತ್ತಡಗಳು ಹೆಚ್ಚಿದ್ದವು. ಆದರೂ ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನ ಮಾಡಿರಲಿಲ್ಲ. ಈ ಎಲ್ಲದರ ನಡುವೆ ಬಿಹಾರದಲ್ಲಿ ನಿನ್ನೆ ಅಲ್ಲಿನ ಜೆಡಿಯು ಸರ್ಕಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ.
ವರದಿ ಬಿಡುಗಡೆಗೆ ಹರಿಪ್ರಸಾದ್ ಆಗ್ರಹ
ಬಿಹಾರ ಮಾದರಿಯಂತೆ ರಾಜ್ಯದಲ್ಲೂ ಜಾತಿ ಗಣತಿ ವರದಿಯನ್ನು ಬಹಿರಂಗ ಪಡಿಸುವ ದಿಟ್ಟತನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಲಿ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಇಂದು ದೆಹಲಿಯಲ್ಲಿ ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಜಾತಿ ವರದಿ ಬಿಡುಗಡೆ ಮಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲುಪ್ರಸಾದ್‌ಯಾಧವ್‌ರವರನ್ನು ಅಭಿನಂದಿಸುತ್ತೇನೆ. ಜಾತಿ ಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ.ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಜಾತಿ ಗಣತಿ ಆಗಬೇಕು ಎಂಬ ಮಾತುಗಳನ್ನಾಡಿದ್ದಾರೆ. ಕರ್ನಾಟಕ ಈಗಾಗಲೇ ಜಾತಿ ಗಣತಿ ವರದಿ ಸಿದ್ಧಮಾಡಿದೆ. ಅದನ್ನು ಬಹಿರಂಗ ಮಾಡಬೇಕು ಎಂದರು.
ಯಾವುದೇ ಜಾತಿ ಒತ್ತಡ ಹೇರಲಿ ಅದನ್ನು ಪರಿಗಣಿಸದೆ ಮೊದಲು ವರದಿ ಬಿಡುಗಡೆಯಾಗಲಿ ಆಮೇಲೆ ಯಾರಿಗಾದರೂ ಅನ್ಯಾಯವಾಗಿದ್ದಾರೆ ಸರಿಮಾಡಬಹುದು. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ವರದಿ ಬಿಡುಗಡೆ ಮಾಡಬೇಕು ಎಂಬುದು ನನ್ನ ಆಶಯ ಎಂದರು.
ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡಾ ರಾಜ್ಯದಲ್ಲಿ ಈಗಾಗಲೇ ಸಿದ್ಧವಾಗಿರುವ ಜಾತಿ ಗಣತಿ ವರದಿಯನ್ನು ಬಹಿರಂಗ ಪಡಿಸುವ ದಿಟ್ಟತನ ತೋರಬೇಕಿದೆ ಎಂದು ಅವರು ಹೇಳಿದ್ದಾರೆ.ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಜಾತಿ ಗಣತಿ ಬಹಿರಂಗಪಡಿಸುವ ಕುರಿತು ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಹಾಗಾಗಿ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಹೇಳಿರುವ ಬಿ.ಕೆ. ಹರಿಪ್ರಸಾದ್ ಅವರು, ಹಿಂದುಳಿದವರು, ಶೋಷಿತರು ಸೇರಿದಂತೆ ಎಲ್ಲ ವರ್ಗಗಳ ಉನ್ನತಿ ಮತ್ತು ಅಭಿವೃದ್ಧಿಗೆ ಜಾತಿ ಗಣತಿ ವರದಿ ಸಹಾಯ ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.