ಜಾತಿಗಣತಿ ವರದಿ ಅನಧಿಕೃತ ಬಿಡುಗಡೆ: ಕೈ ನಾಯಕರು ಹೊಣೆ: ಡಾ.ಸುಧಾಕರರ್

ಬೆಂಗಳೂರು, ನ. 18-ಜಾತಿ ಗಣತಿಯನ್ನು ಗೌಪ್ಯವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅವರಿಗೆ ಬೇಕಾದವರಿಗೆ ಸೋರಿಕೆ ಮಾಡಲಾಗಿದೆ. ಇದರ ಹೊಣೆಗಾರಿಕೆ ಕಾಂಗ್ರೆಸ್‌ ನಾಯಕರು ಹೊರುತ್ತಾರೆಯೇ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನಿಸಿದ್ದಾರೆ.

ಜಾತಿ ಗಣತಿಯ ವರದಿ ಅಧಿಕೃತವಾಗಿ ಬಿಡುಗಡೆ ಮಾಡದ ಕಾಂಗ್ರೆಸ್‌ ನಾಯಕರು, ಪ್ರತಿ ಜಿಲ್ಲೆಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ವರದಿ ಸೋರಿಕೆ ಮಾಡಿದ್ದರು ಆರೋಪಿಸಿದ್ದಾರೆ.

ಚುನಾವಣೆ ಹತ್ತಿರವಾದಂತೆ ಕ್ಷುಲ್ಲಕ ವಿಚಾರಗಳನ್ನೆತ್ತಿ ಆರೋಪ ಮಾಡುವುದನ್ನು, ಸುಳ್ಳು ಆಪಾದನೆ ಮಾಡುವುದನ್ನು ಕಾಂಗ್ರೆಸ್‌ ನಾಯಕರು ಕರಗತ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಇದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, 130 ಕೋಟಿ ರೂ. ಖರ್ಚು ಮಾಡಿ ಜಾತಿ ಗಣತಿ ಮಾಡಲಾಗಿತ್ತು. ಆ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ಕಾಂಗ್ರೆಸ್‌ ಅಭ್ಯರ್ಥಿಗಳ ಬಳಿ ಮಾತ್ರ ಹಂಚಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ಮೂಲಕ ನಗರ ಪಾಲಿಕೆಗಳು ಎನ್‌ಜಿಒಗೆ ಕೆಲವು ಕೆಲಸಗಳನ್ನು ನೀಡುವುದು ನಿರಂತರವಾಗಿ ನಡೆದುಕೊಂಡೇ ಬಂದಿದೆ. ಕಾನೂನಿನ ಪರಿಮಿತಿಯಲ್ಲೇ ಈ ಕೆಲಸ ನಡೆಯುತ್ತದೆ. ನಿಯಮ ಪಾಲಿಸದೇ ಇದ್ದಲ್ಲಿ ಆ ಸಂಸ್ಥೆ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಎ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟಕ್ಕೇ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲಾಗುತ್ತಿದೆ. ಹಾಗಾದರೆ ಜಾತಿ ಗಣತಿ ವರದಿಯ ಸೋರಿಕೆಗಾಗಿ ವಿರೋಧ ಪಕ್ಷಗಳ ನಾಯಕರು ಎಷ್ಟು ಬಾರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.

ಯಾವುದಾದರೂ ತಾರ್ಕಿಕವಾದ ವಿಷಯಗಳನ್ನು ಇಟ್ಟುಕೊಂಡು ಮಾತನಾಡಬೇಕು. ಆದರೆ ಕಾಂಗ್ರೆಸ್‌ ನಾಯಕರು ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ಮಾತನಾಡಿ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ಅವರು ಉತ್ಪ್ರೇಕ್ಷೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಈಗಾಗಲೇ ತನಿಖೆಗಾಗಿ ಕಾನೂನಿನ ಸಲಹೆ ಪಡೆಯಲು ಸೂಚಿಸಿದ್ದಾರೆ. ಕಾನೂನು ಸಲಹೆಯಂತೆ ಸರ್ಕಾರ ಕ್ರಮ ವಹಿಸಲಿದೆ. ಈ ರೀತಿಯ ರಾಜಕೀಯ ಹುನ್ನಾರ ಮಾಡುವುದು ಬಿಜೆಪಿಯ ಇತಿಹಾಸದಲ್ಲೇ ಇಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆಯುತ್ತಿರುವುದರಿಂದ ಇಂತಹ ವಿಷಯಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಜನರ ಮುಂದೆ ಹೋಗುತ್ತಿದೆ ಎಂದರು.