ಜಾತಿಗಣತಿ ನವೆಂಬರ್‍ನಂತರ ಕ್ರಮ: ಸಿಎಂ ಸಿದ್ದರಾಮಯ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಅ.8:- ನವೆಂಬರ್‍ನಲ್ಲಿ ಕರ್ನಾಟಕದ ಜಾತಿಗಣತಿ ವರದಿ ನನ್ನ ಕೈ ಸೇರಬಹುದು. ಆನಂತರ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಯಿಸಿ ಮಾತನಾಡಿದ ಅವರು, ಜಾತಿಗಣತಿ ಸಮಿತಿಯ ಅಧ್ಯಕ್ಷರು ಬದಲಾಗಿದ್ದಾರೆ. ಹೀಗಾಗಿ ನವೆಂಬರ್‍ನಲ್ಲಿ ವರದಿ ಕೊಡುತ್ತಾರೆ. ಜಾತಿಗಣತಿ ಸಮಾಜವನ್ನ ವಿಂಗಡಿಸುವುದಿಲ್ಲ. ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವರದಿ ಪಡೆಯಲಿಲ್ಲ. ಈಗ ಬೇರೆ ಅಧ್ಯಕ್ಷರಿದ್ದು, ಅವರಿಗೆ ಕಾಂತರಾಜು ವರದಿ ಇದ್ದಂತೆಯೇ ಮಾಡಿಕೊಡುವಂತೆ ಹೇಳಿದ್ದೇನೆ. ಅವರು ನವೆಂಬರ್ ನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ. ಯಾವ ಸಮುದಾಯ ಎಷ್ಟಿದೆ ಎಂಬುದು ಅಂಕಿಅಂಶಗಳು ಸರ್ಕಾರಕ್ಕೆ ಬೆಡಕು. ಯೋಜನೆಗಳ ಸುದ್ಧಪಡಿಸಲು ಈ ಯೋಜನೆಗಳು ಅವಶ್ಯಕವಾಗಿದೆ. ಪ್ರಧಾನಿ ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುತ್ತಾರೆ. ಆದರೆ ಅವರ ನಡೆನುಡಿಗೆ ಬಹಳ ವ್ಯತ್ಯಾಸಗಳಿವೆ. ಹೀಗಾಗಿ ಜಾತಿ ಗಣತಿ ವಿರೋಧಿಸುತ್ತಾರೆ ಎಂದರು.
4860 ಕೋಟಿ ರೂ.ಗೆ ಕೋರಿಕೆ: ಗ್ಯಾರಂಟಿ ಯೋಜನೆಗಳಿಗೆ ತೊಂದರೆ ಇಲ್ಲ. ಬರ ಪರಿಹಾರಕ್ಕೂ ಕೇಂದ್ರ ಸರ್ಕಾರಕ್ಕೆ 4860 ಕೋಟಿ ರೂ.ಗಳನ್ನು ಕೋರಿದ್ದೇವೆ. ಆದರೆ ಬೆಲೆ ನಷ್ಟವಾಗಿರುವುದು 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ. ಎಲ್ಲಾ ಸೇರಿ ಒಟ್ಟು 3000 ಕೋಟಿ ರೂ.ಗಳಿಗೂ ನಷ್ಟ ಉಂಟಾಗಿದೆ. ಎನ್. ಡಿ.ಆರ್.ಎಫ್ ನಿಯಮಗಳ ಪ್ರಕಾರ 4860 ಕೋಟಿ ರೂ.ಗಳನ್ನು ಕೋರಿದ್ದೇವೆ. ಕೇಂದ್ರ ಬರ ಅಧ್ಯಯನ ತಂಡ ಮೂರು ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಅವರು ವರದಿ ನೀಡಿದ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಹಾರ ನಿಗದಿ ಮಾಡಲಿದೆ ಎಂದರು.
ನರೇಂದ್ರ ಮೋದಿಯವರು ಎಲ್ಲರನ್ನೂ ಒಳಗೊಂಡ ಸಮಾಜ, ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡದೆ ಹೋದರೆ ಸಬ್ ಕೆ ಸಾಥ್ ಆಗುತ್ತದೆಯೇ, ಎಲ್ಲರನ್ನೂ ಒಳಗೊಂಡಂತೆ ಆಗುತ್ತದೆಯೇ? ಹೇಳುವುದಕ್ಕೂ, ಮಾಡುವುದಕ್ಕೂ ವ್ಯತ್ಯಾಸವಿದೆ. ಹೇಳೋದು ಬೇರೆ, ವಸ್ತುಸ್ಥಿತಿ ಬೇರೆಯಿದೆ. ಕೇಂದ್ರ ಬರ ಅಧ್ಯಯನ ತಂಡ ಸರಿಯಾಗಿ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಅಧ್ಯಯನ ತಂಡಕ್ಕೆ ಎಲ್ಲೆಡೆ ಭೇಟಿ ಮಾಡಿ,ಜನರ ಅಹವಾಲು ಕೇಳಬೇಕು, ಜನಪ್ರತಿನಿಧಿಗಳ ಮಾತನ್ನೂ ಆಲಿಸುವಂತೆ ಸೂಚಿಸಿದ್ದೇನೆ ಎಂದರು.
ಕೇಂದ್ರ ಬರ ಅಧ್ಯಯನ ತಂಡ ಕಾವೇರಿ ಕಣಿವೆಗೆ ಭೇಟಿ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ನಾವು ತೀರ್ಮಾನಿಸುವುದಿಲ್ಲ. ಕೇಂದ್ರ ತಂಡ ಭೇಟಿ ನೀಡಬೇಕಾದ ಸ್ಥಳಗಳನ್ನು ನಿರ್ಧರಿಸುತ್ತದೆ. ಜಿಲ್ಲೆಗಳನ್ನು ಅವರೇ ಪಟ್ಟಿ ಮಾಡಿಕೊಳ್ಳುತ್ತಾರೆ ಎಂದರು. ಹಸಿರು ಬರ ಇದೆ. ಗಿಡ ಇದ್ದರೆ ಸಾಲದು, ಬೆಳೆ ಬರಬೇಕು. ಸೋಮವಾರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಗೆ ತೆರಳುತ್ತಿರುವ ಬಗ್ಗೆ ಮಾತನಾಡಿ ಅಜೆಂಡಾ ಬಗ್ಗೆ ನನಗೆ ತಿಳಿದಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವ ಮಾಧ್ಯಮಗಳ ಮೇಲೆ ದೇಶದ್ರೋಹದ ಪ್ರಕರಣ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅದು ಸರಿಯಲ್ಲ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶವಿಲ್ಲ ಎಂದು ಸಿತೆಂ ಹೇಳಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಡಿಯುವವರನ್ನು ತಡೆಯಲು ಆಗುವುದಿಲ್ಲ, ಅದರಿಂದ ಉದ್ಯೋಗ ಸೃಷ್ಟಿ ಯಾಗುತ್ತದೆ ಎಂದಿರುವ ಬಗ್ಗೆ ಮಾತನಾಡಿ, ಹೊಸತಾಗಿ ತೆರೆಯುತ್ತೇವೆ ಎಂದು ಹೇಳಿಲ್ಲ. ಹೊಸತಾಗಿ ಕೊಡುತ್ತೇವೆ ಎಂದು ಹೇಳಿಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಹೊಸ ಪರವಾನಾಗಿಯನ್ನು ಕೊಡಬೇಕಾದ ಅಗತ್ಯ ಇಲ್ಲ. ಸಾರ್ವಜನಿಕ ಅಭಿಪ್ರಾಯ ಏನಿದೆ ಎಂದು ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಪ್ರಸ್ತುತ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ. ಹೊಸ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಮಹಿಷ ದಸರಾ ಆಚರಿಸುವ ಬಗ್ಗೆ ಮಾತನಾಡಿ ಹಿಂದೆಯೂ ಆಚರಿಸಿದ್ದಾರೆ ಆದರೆ ಚಾಮುಂಡಿ ಬೆಟ್ಟದ ಮೇಲೆ ಆಗಿಲ್ಲ. ಮಹಿಷಾ ದಸರಾ ಎಂದೂ ಸರ್ಕಾರ ಆಚರಿಸಿಲ್ಲವೆಂದರು. ಕಾವೇರಿ ನೀರಿನ ಸಮಸ್ಯೆಗೆ ನಾರಿಮನ್ ಕಾರಣ ಎಂದು ಪ್ರಸನ್ನ ಕುಮಾರ್ ಹೇಳಿರುವ ಬಗ್ಗೆ ಮಾತನಾಡಿ ಅವರಿಗೆ ಮಾಹಿತಿ ಕೊರತೆ ಇದೆ ಎಂದರು. ಸಚಿವ ಈಶ್ವರಖಂಡ್ರೆ, ಶಾಸಕರಾದ ದರ್ಶನ್ ದ್ರುವನಾರಾಯಣ್, ಕರ್ನಾಟಕ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಜೆ.ಜೆ.ಆನಂದ್ ಇನ್ನಿತರರು ಉಪಸ್ಥಿತರಿದ್ದರು.