ಜಾತಿಗಣತಿ ಅಭಿವೃದ್ಧಿಗೆ ಪೂರಕ: ನಿತೀಶ್

ಪಾಟ್ನಾ,ಅ.೩- ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಜಾತಿ ಗಣತಿಯಿಂದ ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.ಬಿಹಾರದಲ್ಲಿ ಇಲ್ಲಿಯವರೆಗೆ ಯಾರಿಂದಲೂ ಮಾಡಲು ಸಾಧ್ಯವಾಗದ ಕೆಲಸ ನಾವು ಮಾಡಿದ್ದೇವೆ. ಜಾತಿ ಗಣತಿ ಬಹಳ ಹಿಂದೆಯೇ ನಡೆಯಬೇಕಾಗಿತ್ತು, ಆದರೆ ಅದು ಇಲ್ಲಿಯವರೆಗೆ ಮಾಡಲಿಲ್ಲ. ಅವರಿಗೆ ಎಲ್ಲಾ ಸಮಾಜದ ಅಭಿವೃದ್ಧಿ ಬೇಕಾಗಿಲ್ಲ. ಜಾತಿ ಜಾತಿ ಮತ್ತು ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಠಿಸುವುದೇ ಅವರ ಕೆಲಸ ಎಂದು ಬಿಜೆಪಿ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಹಾರ ಸರ್ಕಾರ ಎಲ್ಲಾ ಜಾತಿಗಳ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಕೆಲಸ ಮಾಡುತ್ತದೆ ಈ ಜನಗಣತಿ ಬಿಡುಗಡೆ ಮಾಡುವುದನ್ನು ತಡೆಯಲು ಅನೇಕರು ಪ್ರಯತ್ನಿಸಿದರು, ಆದರೆ ಅವರು ಯಶಸ್ವಿಯಾಗಲಿಲ್ಲ ಎಂದು ಹೇಳಿದ್ದಾರೆ.
ಜಾತಿವಾರು ಗಣತಿ ಕಾರ್ಯದಲ್ಲಿ ನಿರತರಾಗಿರುವ ಇಡೀ ತಂಡವನ್ನು ಅಭಿನಂದಿಸಿದ ಅವರು, ಸಮೀಕ್ಷೆಯಲ್ಲಿ ಜಾತಿಗಳು ಬಹಿರಂಗಗೊಂಡಿದ್ದು ಮಾತ್ರವಲ್ಲದೆ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಬಿಜೆಪಿ ವಾಗ್ದಾಳಿ
ಬಿಹಾರದ ಪ್ರತಿಪಕ್ಷ ಬಿಜೆಪಿ ನಿತೀಶ್ ಕುಮಾರ್ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ, ಇದು ವರ್ಷಗಳಲ್ಲಿ “ಬದಲಾದ ಸಾಮಾಜಿಕ ಮತ್ತು ಆರ್ಥಿಕ ವಾಸ್ತವಗಳ” ಕಲ್ಪನೆಯನ್ನು ನೀಡಿಲ್ಲ ಎಂದು ಒತ್ತಿಹೇಳಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಿಹಾರ ಸರ್ಕಾರವನ್ನು ಟೀಕಿಸಿದ್ದಾರೆ. ನಿತೀಶ್ ಸರ್ಕಾರದ ವರದಿ ಸಾಮಾನ್ಯ ಜನರಲ್ಲಿ ಗೊಂದಲವನ್ನು ಹರಡುತ್ತಿದೆ ಮತ್ತು ಜನರಲ್ಲಿ ದ್ವೇಷವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ವರದಿಯ ಬದಲು ನಿತೀಶ್ ಕುಮಾರ್ ಅವರು ತಮ್ಮ ‘ರಿಪೋರ್ಟ್ ಕಾರ್ಡ್’ ಅನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಸಲಹೆ ನೀಡಿದ್ದಾರೆ

ಸರ್ವಪಕ್ಷ ಸಭೆ
ಜಾತಿ ಗಣತಿ ಫಲಿತಾಂಶಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ಜಾತಿ ಗಣತಿ ವರದಿಯ ವಿವರಗಳನ್ನು ಹಂಚಿಕೊಳ್ಳಲು ಮತ್ತು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲು ಮಂಗಳವಾರ ಸರ್ವಪಕ್ಷ ಸಭೆ ಕರೆದಿರುವುದಾಗಿ ನಿತೀಶ್ ಕುಮಾರ್ ತಿಳಿಸಿದ್ದಾರೆ.