ಅಹ್ಮದಾಬಾದ್ ,ಜು.೨೦- ನಗರದ ಮೂಲಕ ಹಾದು ಹೋಗಿರುವ ಸರ್ಕೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ಫ್ಲೈಓವರ್ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ೧೩ ಮಂದಿ ಮೃತಪಟ್ಟು, ೨೦ ಮಂದಿ ಗಾಯಗೊಂಡಿದ್ದಾರೆ. ಬೇರೊಂದು ಅಪಘಾತವನ್ನು ನಿಂತು ನೋಡುತ್ತಿದ್ದವರ ಮೇಲೆ ವೇಗವಾಗಿ ಬಂದ ಜಾಗ್ವಾರ್ ಕಾರು ಹರಿದು ಸಂಭವಿಸಿದ ಭೀಕರ ಅಪಘಾತದಲ್ಲಿ ೧೩ ಜನ ಮೃತಪಟ್ಟಿದ್ದು ಗಾಯಗೊಂಡಿರುವ ೨೦ ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಸರ್ಕೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ಫ್ಲೈಓವರ್ ರಸ್ತೆಯಲ್ಲಿ ರಾತ್ರಿ ೧.೩೦ರ ಸುಮಾರಿಗೆ ಇಸ್ಕಾನ್ ಫ್ಲೈಓವರ್ ರಸ್ತೆಯಲ್ಲಿ ಲಾರಿ ಹಾಗೂ ಎಸ್‌ಯುವಿ ಕಾರು ಅಪಘಾತಕ್ಕೀಡಾಗಿದ್ದು, ಇದನ್ನು ನೋಡುತ್ತ ಹಲವಾರು ಮಂದಿ ನಿಂತಿದ್ದಾಗ ಗಂಟೆಗೆ ೧೨೦ ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬಂದ ಜಾಗ್ವಾರ್ ಕಾರು ಅವರ ಮೇಲೆ ಚಾಲಕ ನಿಯಂತ್ರಣ ತಪ್ಪಿ ಹರಿದಿದ್ದಾನೆ. ಇದರಿಂದ ಇಬ್ಬರು ಪೊಲೀಸರು, ಆರು ವಿದ್ಯಾರ್ಥಿಗಳು ಸೇರಿ ಒಟ್ಟು ೧೩ ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ೨೦ ಜನರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಕಾರು ಗುದ್ದಿದ ರಭಸಕ್ಕೆ ಜನ ೨೫-೩೦ ಅಡಿ ದೂರದಲ್ಲಿ ಬಿದ್ದಿದ್ದಾರೆ. ಸ್ಥಳದಲ್ಲೇ ಆರು ಮಂದಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರಿನ ಚಾಲಕನನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕೈಕಟ್ಟಿ ನೋಡಿದ ಜನ:
ಹಲವಾರು ಮಂದಿಯ ಮೇಲೆ ಹರಿದ ಕಾರು ೧೬೦ ಕಿ.ಮೀ ವೇಗದಲ್ಲಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ಜನ ಬೇರೊಂದು ಅಪಘಾತವಾಗಿದ್ದನ್ನು ನೋಡುತ್ತ ನಿಂತಿದ್ದು, ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸುವಷ್ಟರಲ್ಲೇ ಗುದ್ದಿದೆ. ಚಾಲಕ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡ ಕಾರಣ ಭೀಕರವಾಗಿ ಅಪಘಾತ ಸಂಭವಿಸಿದೆ ಅಹ್ಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತ ಇದಾಗಿದ್ದು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಅಪಘಾತದ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.