ಜಾಗೃತಿ ಸಂಭಾಷಣೆ:ಮತದಾನ

*ಮನು: ಅವ್ವಾ! ನೀ ಇಂದು ಬೇಗ ಬೇಗ ಸ್ನಾನಮಾಡಿ, ಚಂದ ಮೇಕಪ್ ಮಾಡಿಕೋ! 

*ಚನ್ನವ್ವ: ಯಾಕ್ಲ ಮಗ! ದಿನ  ಮನೆ ಮನೆ ಹೋಗಿ ಮುಸುರೆ ಬಟ್ಟೆ ನೆಲ ತೊಳೆದು ಬಂದ ಮ್ಯಾಲೇನೇ  ಸಂಜಿಗೆ  ನನ್ನ ಮೈ ಕೈತೊಳೆಯೋದು . ಇವತ್ತೇನ್ ವಿಶೇಷ

ಮಗ,,,!? ನಾ ಬೇಗ ಸ್ನಾನ ಮಾಡಿ ಅದರಲ್ಲೂ ಎಂದೂ ಇಲ್ಲದ ನಾನು ಚಂದ ಮೇಕಪ್  ಮಾಡ್ಕಳದು ಅಂದ್ರ! ನಂಗ್ ನಿನ್ನ ಮಾತೇ ತಿಳಿವಲ್ದು  ಮಗ! 

*ಮನು: ಅವ್ವ ನೀ ಇಂದು ನಾ ಹೇಳಿದಂಗ್ ಕೇಳಬೇಕು ಮತ್ತಾ! (ಮನು ತನ್ನ ಕಾಲೇಜಿನ ಬ್ಯಾಗಿನೊಳಗೆ ಇರಿಸಿದ್ದ ಬಿಳಿ ಬಾಕ್ಸ್ ತಗೆದು ಅವ್ವನ ಕಡೆ ನೀಡಿದನು!) 

ತಗೋ ಸ್ನಾನ ಮಾಡಿ ಚಲೋ ಸೀರೆ ಉಟ್ಟು ಈ ಬಾಕ್ಸ್ ನಲ್ಲಿರುವ ಸಾಮಾನಿಂದ ಚಂದ ಮೇಕಪ್ ಮಾಡ್ಕೋ

*ಚನ್ನವ್ವ:( ಬಾಕ್ಸ್ ತಗೆದು ನೋಡಿ!) ಮಗಾ!ಇದೇನ್ಲಾ  ಈ ವಯಸ್ನಾಗ ನಂಗ್ ತುಟಿಗೆ ಬಣ್ಣ, ಕೆನ್ನೆಗೆ ಬಣ್ಣ, ಮುಖಕ್ ಸ್ನೋ ಪೌಡರ್ ಬೇಕೆನ್ಲಾ!? ಇವೆಲ್ಲಾ ನಂಗ್ ಸರಿ ಬರಕಿಲ್ಲಾ   ನೋಡ್  ಮಗ! 

*ಮನು: ಅವ್ವಾ! ಇವತ್ ನಾಕು ಕಾಸು ಮಾಡಬೇಕೆಂದರೆ ಇವತ್ತಿನ ಕಾಲಕ್ ತಕ್ಕಂತೆ ನಾವು ಗುಂಪಲ್ ಜೈ ಜೈ ಅನ್ನಬೇಕು! ನಿಂಗ್ ಇವೆಲ್ಲಾ ತಿಳಿಯಾಕಿಲ್ಲ! ನಾ ಹೇಳಿದಂಗ್ ಮಾಡವ್ವ! 

*ಚನ್ನವ್ವ: ನಂಗ್ ನೀ ಏನು ಹೇಳ್ತಿದಿ ಒಂಚೂರು ಅರ್ಥ ಆಗೋಲ್ಲದು ಕಣ್ ಮಗ! 

*ಮನು: ಅವ್ವ ಮುಂದಿನ ತಿಂಗಳು ಎಲೆಕ್ಷನ್ ಐತಿ! ಅದಕ್ಕ  ನೀ ದಿನಕ್  ಒಂದು  ಪಕ್ಷದವರ  ಪ್ರಚಾರಕ್ ಅಂತ ಗುಂಪಲ್ ವೇಷ ಬದಲಿಸಿಕೊಂಡು ಮನೆ ಮನೆಗೆ ಹೋಗಿ, ಮತ ಕೊಡ್ರಿ,,,,ಮತ ಕೊಡ್ರಿ ಅಂತ ಕೇಳಿದರಾ ಸಾಕು! ಜೊತೆಗೆ ಪಕ್ಷದ ಕಾರ್ಯಕರ್ತರು, ಲೀಡರ್ ಅಂತ ಇರ್ತಾರಲ್ಲ!  ಅವರು ಮಂದಿಗೆ ಹಂಚಲು ಕೊಡೋ ಸೀರೆ, ಪಂಚೆ, ವಾಚು, ಏನೇನೋ ವಸ್ತುಗಳನ್ನು  ಹಂಚಿ  ಅವರು ಹೇಳಿದ ಪಕ್ಷಕ್ ಮತ ಹಾಕಲು ಮನವೊಲಿಸಿದರೆ ಮಸ್ತ್ ಆಯ್ತು!   ದಿನಕ್ಕೆ ನಿಂಗಾ  ಐದು ಸಾವಿರ ಬರುತ್ತೆ! ಎಲೆಕ್ಷನ್ ಮುಗಿಯತನಕ ಅವರಿವರ ಮನೆ ಕಸ ಮುಸುರೆ ಬಳಿಯದು ತಪ್ಪುತ್ತೆ! 

*ಚನ್ನವ್ವ: ಹೌದಾ ಮಗಾ!? ಮತ್ ಆಮೇಲಿನ ಹೊಟ್ಟೆ ಪಾಡಿಗೆ!? 

*ಮನು: ಆಮೇಲಿನ ಹೊಟ್ಟೆ ಪಾಡಿಗೆ ಇದಿಯಲ್ಲವ್ವ ಅವರಿವರ ಮನೆ ಮುಸುರೆ ಬಟ್ಟೆ ತೊಳಿಯದು! 

*ಚನ್ನವ್ವ: ಮಗ ಚುನಾವಣೆಗೆ ನಿಂತ್ ಮಂದಿ ಕೊಡೋ ಕೆಟ್ ಪುಡಿಗಾಸಿಗಾಗಿ ನನ್ನ ಕೆಲಸದ ನಿಯತ್ತು ಕಳ್ಕ  ಅಂತೀ!? 

*ಮನು: ಅವ್ವಾ, ನೀ ಅವರಿವರ ಮನೆ ಮುಸುರೆ ತಿಕ್ಕಿದರೆ ತಿಂಗಳಿಗೆ ನಿಂಗ್ ಒಂದೂವರೆ ಸಾವಿರ ಸಿಗದು ಕಷ್ಟ. ಅಂತಹದರಲ್ ನಿಂಗ್ ದಿನಕ್ಕೆ ಐದು ಸಾವಿರ ಪ್ರಚಾರ ಮಾಡಿದರ ಸಿಗತ್ತವ್ವ! ಜೊತೆಗೆ ಫೈವ್ ಸ್ಟಾರ್              ಹೋಟೆಲ್ನಾಗ ಊಟ, ಹೊಸ ಬಟ್ಟೆ, ಕೈ ತುಂಬ ದುಡ್ಡು ಕೊಡ್ತಾರವ್ವ! 

*ಚನ್ನವ್ವ: ಮಗಾ! ನಿಂಗ್ ನಿಮ್ಮವ್ವ ಇಂತಹದೆಲ್ಲಾ ಮಾಡೋದ್ರಿಂದ  ಏನ್ ಸಿಕ್ತೈತಿ!? ನಾ ಕೂಲಿ ಮಾಡಿ ನಿಂಗ್ ನಿಯತ್ತಾಗಿ ಸಾಕ್ತಿದಿನಲ್ಲಾ ಅದರಾಗೆ ಏನ್ ಕಮ್ಮಿ ಮಾಡೀನಿ ನಿಂಗೆ!? 

*ಮನು: ಅವ್ವಾ ನೀ ದುಡಿಯೋದು ಬರೀ ನನ್ನ ಓದಿನ ಖರ್ಚು ಹೊಟ್ಟೆಗೆ ಅನ್ನ, ಉಡಾಕೆ ಎರಡು ಬಟ್ಟೆಗೆ ಸಾಕಾಗೈತಿ! ಆದರೆ  ನಾ ಓಡಾಡೋಕೆ ಎಲ್ಲರಂಗ್ ಬೈಕು ತಗಳಾಕೆ,  ನಾಕು ಮಂದಿ ತರಹ ಸ್ಟೈಲ್ ಆಗಿರಲು  ಆಗಲ್ಲ! 

*ಚನ್ನವ್ವ: ಮಗಾ! ಅವರಿವರು ಕೊಡೋ ಎಂಜಲು ಕಾಸು ನಾವು ನಿಯತ್ತಾಗಿ ದುಡಿದು ತಂದ ಕಾಸಿನಷ್ಟು  ನೆಮ್ಮದಿ ಕೊಡಲ್ಲ ಮಗ! 

*ಮನು: ನಿಯತ್ತು! ನಿಯತ್ತು!! ಅವ್ವಾ ನೀ ಹೀಗೆ ಅನ್ಕಂಡು ಬದುಕಿದರೆ,,,, ಒಂದಿನ ಜೀವ ತೇದು ತೇದು ಮುದುಕಿಯಾಗ್ತಿ ಅಷ್ಟೇ ಹೊರತು ಯಾವ ಸುಖನೂ ಅನುಭವಿಸಲ್ಲ! ನನ್ನ ಮಾತು ಕೇಳವ್ವ ಚಂದ ಡ್ರೆಸ್ ಮಾಡ್ಕಳಕೆ ಅವರೆ ಎಲ್ಲಾ ಕೊಡಿಸ್ತಾರೆ,,,, ಕೈ ತುಂಬ ದುಡ್ಡು ಕೊಡ್ತಾರೆ,,, 

( ಮನು ಹೇಳುವುದನ್ನು ತಡೆದು ಸಕತ್ ಕೋಪಗೊಂಡ ಚನ್ನವ್ವ,,,,) 

*ಚನ್ನವ್ವ: ಏ ಏನ್ ಮಾತಾಡಕತ್ತಿ ನೀನು!? ನೀ ನಾ ಸಾಕಿದ ಮಗನಾ!? ನನ್ನ ಹೊಟ್ಟೆಗೆ ಹುಟ್ಟಿದ ಕೂಸಾ!? ಮಗ ಚಂದಾಗಿ  ಓದ್ಲಿ,,,, ದೊಡ್ ಮನುಷ್ಯ ಆಗ್ಲಿ,,,, ಸಮಾಜಕ್ಕೆ ನಿಯತ್ತಿನ ಸೇವೆ ಮಾಡಲಿ ಅಂತ ನಾ ಕನಸಿನ ಅರಮನೆ ಕಟ್ಟಿ,,,, ಅದಕ್ಕಾಗಿ ನಿಯತ್ತಿನ ಸೇವೆ ಮಾಡ್ಕೊಂಡು ಅದರಲ್ಲೇ  ಪರಮಾತ್ಮನನ್ನು  ಕಂಡು  ಆನಂದದಿಂದ ಜೀವನ ಮಾಡ್ತಿದ್ರೆ,,,, ನಂಗ್ ಬಣ್ಣದ ಜೀವನ ತೋರಿ,,, ಪಾತಾಳಕ್ಕೆ ತಳ್ಳಿ ನಾಳಿನಾಗ್ ನೀ ಕೂಡೆ ಕೆಟ್ ಕೆರ ಹಿಡಿಯಂಗ್ ಆಗಾಕೆ  ಹೊಂಟಿಯೇನು!? 

ಏ ಮಗಾ!? ತಿಳ್ಕಾ!  ನಾ ಬದುಕಿರೋ ಮಟ,,, ನಿಯತ್ತಾಗೆ ದುಡಿದು ನಿಂಗ್ ನಿಯತ್ತಿನ ಅನ್ನ ಉಣಿಸಿ ನಿಯತ್ತಿನ ಮನುಷ್ಯಆಗಂಗೆ  ನಾ ಮಾಡ್ತೀನಿ. ಅದಬಿಟ್ಟು  ನೀ ಏನಾರ ಕೆಟ್ ಮಂದಿ ಮಾತ್ ಕೇಳಿ,,,, ನೀ ಹಾಳಾಗದಲ್ದ ನಂಗೂ ಬುದ್ಧಿ ಕೆಡಿಸಾಕ್ ಬಂದ್ಯೋ,,,, ನಂಗ್ ಮೋಸ ಮಾಡಿ ನೀ ಏನಾದರೂ ಹಿಂಗ್ ಬಣ್ಣದ ಮಂದಿ ಕೂಡಿ ಆಟ ಆಡಿದ್ಯೋ ನಾ ಪ್ರಾಣಕಳ್ಕಂಡ್ ಬಿಡ್ತೀನಿ ಮಗಾ! ಜೋಕೆ! 

*ಮನು: ಅವ್ವಾ ಇದ್ರಾಗೇನ್ ತಪ್ಪೈತಿ!

*ಚನ್ನವ್ವ: ಮಗಾ! ಸಾಲಿಗೋಗಿ  ನಾಕು ಅಕ್ಷರ ಕಲಿತು ಏನ್ ಮಾತಾಡಕ್ಕತ್ತಿ! ನಮ್ಮ ದೇಶ ಚಂದಾಗಿರಬೇಕಂದ್ರ ನಾವು ಮಾಡುವ ಪ್ರತಿ ಕೆಲಸದಾಗೂ ನಿಯತ್ ಬೇಕು! ಎಂಜಲು ಕಾಸಿಗ  ಆಶಿ ಮಾಡ್ಕೊಂಡು ನನ್ನೇ ನಂಬಿದ ನಾಕು ಮನೆಯವರಿಗೂ ದೇಶಕ್ಕೂ ಮೋಸ ಮಾಡದು ತಪ್ಪು. ನಮ್ಮದು  ಸ್ವಚ್ಛ  ಪ್ರಜಾಪ್ರಭುತ್ವದ ರಾಷ್ಟ್ರ. ಅದನ್ನು ಕಾಪಾಡಬೇಕಂದ್ರ ನಾವು ಯಾರ ಆಮಿಷಕ್ಕೂ ಒಳಗಾಗದೆ ದೇಶ ಕಾಯುವ ಒಳ್ಳೆ ವ್ಯಕ್ತಿ ಯಾರಂತ ನಾವೇ ವಿವೇಕದಿಂದ ಚಿಂತಿ ಮಾಡಿ, ಮತದಾನ ಮಾಡಬೇಕು. ವಸ್ತುಗಳನ್ನು  ಹಂಚಿ ಓಟು  ಹಾಕಿಸಬಾರದು ಮಗಾ! ಅಷ್ಟಕ್ಕೂ ನಮ್ಮ ಜನ ಏನು ದಡ್ಡರಲ್ಲ! ಕೊಡೋದೆಲ್ಲಾ ತಗಂತಾರೆ ತಮಗೆ ಮನಸ್ಸಿಗೆ ಬಂದವರಿಗೆ ಓಟು ಮಾಡ್ತಾರೆ! ಮತದಾನ ಅಂಬೋದು  ಪ್ರತಿ ಒಬ್ಬ ಪ್ರಜೆಯ ಕೈಯಲ್ಲಿ ಇರುವ ಪವಿತ್ರವಾದ ರಾಜಕೀಯ ಆಯುಧ; ದೇಶ ಪ್ರಗತಿಯ ಆಯುಧ! ಅದರಿಂದ ನಮ್ಮ ದೇಶವನ್ನು ನಾವು ಪ್ರಾಮಾಣಿಕತೆಯಿಂದ ಪವಿತ್ರತೆಯಿಂದ ಕಾಯಬಹುದು.ನಾವು ಯಾವುದೇ ಕಾನೂನುಬಾಹಿರವಾದ   ಅನೀತಿಯುತ ಚುನಾವಣಾ ಕೆಲಸಗಳಲ್ಲಿ ಭಾಗಿಯಾಗದೆ   ಪವಿತ್ರವಾಗಿ,ನಿಯತ್ತಾಗಿ ಇದ್ದರೆ ನಾವು ನಮ್ಮ ದೇಶವೆಲ್ಲಾ ಶಾಂತಿ ನೆಮ್ಮದಿಯಿಂದ ಇರ್ತದ ಮಗ. ಬೇಕಾದರೆ ನಾವು ಮನೆಗೆಲಸ ಮಾಡೋ ಕೂಲಿ ಹೆಂಗಸರು ಸೇರ್ಕೊಂಡು ಮತದಾನ ಜಾಗೃತಿ ಅಂತಹ ಕಾರ್ಯಕ್ರಮ ಮಾಡಬಹುದೇ ಹೊರತು, ನಮ್ಮತನ ಮಾರ್ಕಂಡು,ಎಂಜಲು ಕಾಸಿಗಾಗಿ ಸಿಕ್ಕ ಸಿಕ್ಕ ರಾಜಕೀಯ ಪಕ್ಷಗಳ ವ್ಯಕ್ತಿಗಳ ಹಿಂದ್ಹಿಂದೆ  ನಿಯತ್ತಿಲ್ಲದೆ ಓಡಾಡೋದು ತಪ್ಪು ಮಗ. ಅದು ವಿದ್ಯಾರ್ಥಿಯಾದ ನಿಂಗೂ ಶೋಭೆ ಅಲ್ಲ, ಪ್ರಾಮಾಣಿಕ ದುಡಿದು ತಿನ್ನೋ ಯಾವ ವ್ಯಕ್ತಿಗೂ ಶೋಭೆ ಅಲ್ಲ! 

*ಮನು: ಅವ್ವಾ ಹಂಗಾರೆ ಪಕ್ಷದ ಪರ ಪ್ರಚಾರ ಮಾಡೋದು ತಪ್ಪೇನವ್ವಾ!? 

*ಚನ್ನವ್ವ: ಅದು ನನ್ನ  ನಿನ್ನ ಕೆಲಸ ಅಲ್ಲ ಮಗ!   ನಿಯತ್ತಾಗಿ  ಒಂದೇ ಪಕ್ಷದಲ್ಲಿದ್ದು, ಅದರ ಪ್ರಾಮಾಣಿಕ ಕಾರ್ಯಕರ್ತರಾಗಿ ಸದಾ ಕಾಲಕ್ಕೂ, ಸಮಾಜ ಸೇವೆ ಮಾಡೋವಂತಹ ಮಂದಿ ಇರ್ತಾರೆ ಮಗ ಅವರು ಅದಕ್ಕಂತ ಪಕ್ಷದಿಂದ ಸಂಬಳಾನೂ  ಪಡಿತಾರೆ ಅವರು ಮಾಡ್ಕಂತಾರೆ! ಪಕ್ಷದ ಕೆಲಸ ಅನ್ನುವುದು ಚುನಾವಣೆ ಬಂದಾಗ ಮಾಡುವ ಅಬ್ಬರದ ಆಮಿಷದ ವಂಚನೆ ಕೆಲಸ ಅಲ್ಲ ಮಗಾ! ತೋರಿಕೆ ಕೆಲಸ ಅಲ್ಲ!  ಪಕ್ಷ ಅನ್ನೋದು ನಾಯಕನನ್ನು ಆರಿಸಲು ಇರುವ ಒಂದು ಸಂಕೇತ ಮಾತ್ರ! ಯಾವ ಪಕ್ಷ ಅಧಿಕಾರಕ್ಕೆ ಬಂದರೂ   ಸದಾ ಕಾಲ ಸೇವಾ ಮನೋಭಾವದಿಂದ ಜನರ ಕಾಳಜಿಗಾಗಿ ಯಾರು ಸಮಾಜ ಪೂರಕ ದುಡಿತಾರೆ, ಅವರು ನಿಜವಾದ ರಾಜಕೀಯ ಕಾರ್ಯಕರ್ತರು ಮಗ! ಅವರ ಗುಣಧರ್ಮ, ಸೇವಾ ಮನೋಭಾವವನ್ನು  ಸಮಾಜದ ಜನ ಕಾಣ್ತಾ ಇರ್ತಾರೆ,,,,ಗುರುತಿಸ್ತಾರೆ. ತಮ್ಮ ನಾಯಕ ಯಾರು ಆದರೆ   ಸರಿ ಅಂತ!? ವಿದ್ಯಾರ್ಥಿಯಾದ ನಿಂಗೆ, ನಿನ್ನ ಸಾಕಲು ಕೂಲಿ ಮಾಡ್ತಿರುವ ನಂಗೆ ನಮ್ಮ ನಮ್ಮದೇ ಆದ ಜವಾಬ್ದಾರಿಗಳಿವೆ  ಮಗಾ! ಅದನ್ನು ನಿಯತ್ತಾಗಿ ಮಾಡ್ಕೊಂಡು ಹೋಗೋಣ! ಚುನಾವಣೆ, ಪ್ರಜಾಪ್ರಭುತ್ವ, ಸಂವಿಧಾನ, ರಾಜಕಾರಣ ಇವೆಲ್ಲ ತುಂಬ ಪವಿತ್ರ. ಅವುಗಳ ಪವಿತ್ರತೆ ಉಳಿಸಬೇಕಾದದ್ದು ದೇಶದ ಪ್ರತಿ ಪ್ರಜೆಯ ಕರ್ತವ್ಯ. ನಾವು ಏನೇ ಮಾಡಿದರೂ ಪ್ರಾಮಾಣಿಕವಾಗಿ ನಿಯತ್ತಾಗಿ ಮಾಡಬೇಕು ಮಗ! ಬೇಕಾದರೆ ನೀನು ಚೆನ್ನಾಗಿ ಓದಿ, ವಿವೇಕದಿಂದ ಚಿಂತಿಸಿ, ಒಂದು ಪಕ್ಷವನ್ನೇ ನಿಯತ್ತಾಗಿ ಪ್ರತಿನಿಧಿಸಿ, ಅದರ ಕಾರ್ಯಕರ್ತನಾಗಿಯೇ  ಪ್ರಾಮಾಣಿಕವಾಗಿ ದುಡಿದು, ಸೇವೆಯಿಂದ ಜನರ ಪ್ರೀತಿ ಗಳಿಸಿ ಜನನಾಯಕನೇ ಆಗು! ಆದರೆ ಈಗ ನೀನು ವಿದ್ಯಾರ್ಥಿ ಮಾತ್ರ ಆಗಿ, ನಿನ್ನ ಜವಾಬ್ದಾರಿಗಳನ್ನು ನಿಯತ್ತಾಗಿ ಮಾಡು. ಮತದಾನ ಜಾಗೃತಿಯಂತಹ ಉತ್ತಮ ಕೆಲಸಗಳನ್ನು ಮಾಡು ಅದು ಬಿಟ್ಟು, ಹಣ ವಸ್ತುಗಳಿಗಾಗಿ ನಿನ್ನ ನೀ ಮಾರ್ಕೋಬ್ಯಾಡ ಮಗ! 

*ಮನು: ಅವ್ವಾ! ನೀ ಹೇಳದು ಸತ್ಯ ಇದೆ. ನನ್ನ ಕ್ಷಮಿಸವ್ವ ನಿನಗೆ ಬಹಳ ನೋವು ಮಾಡಿದೆ. 

*ಚನ್ನವ್ವ: ನಿಂಗ್ ತಿಳುವಳಿಕೆ ಇಲ್ದ ಹಿಂಗೆ ತಪ್ ಮಾಡಿದಿ ಮಗ! ಇನ್ನು ನೀ ಚುನಾವಣಾ ಜಾಗೃತಿ ನೀತಿ ಸಂಹಿತೆ ಬಗ್ಗೆ ನಿನ್ಮೇಷ್ಟ್ರುಗಳಿಂದ  ಸರಿ ತಿಳ್ಕ ಮಗಾ! ಸದಾಚಾರದಲ್ಲೇ ದೇಶದ ಗೌರವ ಕಾಯುವಂತಹ  ಕೆಲಸ ಮಾಡು. ಅದಕ್ಕೆ ನಾವೇನು ರಾಜಕೀಯದಲ್ಲಿ ಕೆಲಸ ಮಾಡೋ ಮಂದೀನೆ  ಆಗಬೇಕಿಲ್ಲ. ನಮ್ಮ ನಮ್ಮ ಕೆಲಸ ನಿಯತ್ತಾಗಿ ಮಾಡಿದರೆ ಸಾಕು! ಮತದಾನ ಕೂಡ ನಮ್ಮ ಜವಾಬ್ದಾರಿ, ಕರ್ತವ್ಯ. ಅದನ್ನು ಕೂಡ ನಾವು ಪ್ರಾಮಾಣಿಕತೆಯಿಂದ  ಮಾಡಬೇಕು. ತಿಳಿಯದ ಮಂದಿಗೂ ನಮ್ಮ ನಮ್ಮ  ಕುಟುಂಬ ವಠಾರಗಳಲ್ಲಿ  ಜಾಗೃತಿ ಮೂಡಿಸಬೇಕು. ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾಲದಲ್ಲಿ ಗುಂಪು ಸೇರಿ  ಅನುಮಾನಾಸ್ಪದವಾದಂತಹ ಯಾವುದನ್ನೂ ಮಾಡಬಾರದು ಮಗ!  ಅರಿತು ಜಾಗ್ರತೆ ನಡೆದರೆ ನಮಗೂ ಉಳಿವು; ದೇಶಕ್ಕೂ ಉಳಿವು! ಮಗಾ, ನೀ ಇನ್ನು ಪರೀಕ್ಷೆ ಮುಗಿತಂತ  ಅರಿವಿಲ್ಲದೆ ಮಂದಿ ಹಿಂದೆ ಹೋಗಬೇಡ! ಗ್ರಂಥಾಲಯಕ್ಕೆ ಹೋಗಿ ಒಂದಿಷ್ಟು ಪುಸ್ತಕ ಓದು! ನಾನು ನನ್ನ  ಕಾಯಕ ಮಾಡಲು ಹೋಗ್ತೀನಿ,,,, ! 

*ಮನು: ಆಗಲವ್ವ! ಇವತ್ ನೀನು ನನ್ನ ಸಾಲಿ ಮೇಷ್ಟ್ರು ಕೂಡ ಹೇಳದ ವಿವೇಕ ಜ್ಞಾನ ಹೇಳಿ, ನನ್ನ ಕಣ್ತೆರೆಸಿಬಿಟ್ಟೆ! ಜಾಗೃತಿ ಮೂಡಿಸಿದೆ!  ಇನ್ಮುಂದೆ ನಾನು ಏನೇ ಮಾಡಿದರೂ, ದೇಶಕ್ಕ ನಾ ಏನು ಕೊಡಬಹುದಂತ ಚಿಂತಿಸಿಯೇ ಒಳ್ಳೆ ಪ್ರಜೆಯಾಗುವಂತಹ ಪ್ರಾಮಾಣಿಕವಾದ ಒಳ್ಳೇ  ಕೆಲಸ ಮಾಡ್ತೀನವ್ವ. 

*ಚನ್ನವ್ವ: ಹುಷಾರು ಮಗ! ನಿಂಗ್ ಒಳ್ಳೆಯದಾಗಲಿ,,, 

**********************************************

ಲೇಖಕಿ: ಶ್ರೀಮತಿ//ಎ.ಸಿ.ಶಶಿಕಲಾ ಶಂಕರಮೂರ್ತಿ, ಶಿಕ್ಷಕಿ, ಸಾಹಿತಿ, ದಾವಣಗೆರೆ.