ಜಾಗೃತಿ, ಮುಂಜಾಗ್ರತೆಯಿಂದ ಏಡ್ಸ್ ಪ್ರಮಾಣದಲ್ಲಿ ಇಳಿಕೆ

ಕಲಬುರಗಿ,ಡಿ.1: ಜಗತ್ತಿನ ಭೀಕರ ರೋಗಗಳಲ್ಲಿ ಒಂದಾದ ಏಡ್ಸ್ ರೋಗವು ವಿವಿಧ ಕಾರಣಗಳಿಂದ ಉಂಟಾಗುತ್ತಿದ್ದು ಅದಕ್ಕೆ ನಿರ್ಧಿಷ್ಟ ಔಷಧಿಯಿಲ್ಲ. ಅದಕ್ಕೆ ಮುನ್ನೆಚ್ಚರಿಕೆ, ಜಾಗೃತಿಯೇ ಮದ್ದಾಗಿದೆ. ಸರ್ಕಾರ, ಆರೋಗ್ಯ ಇಲಾಖೆ, ವೈದ್ಯರು, ಸಿಬ್ಬಂದಿ ಹಾಗೂ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಎನ್.ಜಿ.ಓ.ಗಳು ಏಡ್ಸ್ ರೋಗದ ಬಗ್ಗೆ ವ್ಯಾಪಕವಾದ ಜಾಗೃತಿ, ಪೂರಕ ಚಿಕಿತ್ಸೆಯ ಮೂಲಕ ಏಡ್ಸ್ ರೋಗಿಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2030ಕ್ಕೆ ಸಂಪೂರ್ಣವಾಗಿ ನಿರ್ಮೂಲನೆಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ವೈದ್ಯಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ‘ವಿಶ್ವ ಏಡ್ಸ್ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ರೋಗ ಪೀಡಿತ ತಾಯಿಯಿಂದ ಮಗುವಿಗೆ ಪ್ರಸಾರ, ರೋಗಿ ಬಳಸಿದ ಬ್ಲೇಡ್, ಸೀರೆಂಜ ಬಳಸುವುದು ಸೇರಿದಂತೆ ಮತ್ತೀತರ ಕಾರಣಗಳಿಂದ ರೋಗ ಹರಡುತ್ತದೆ. ಆದರೆ ರೋಗಪೀಡಿತ ವ್ಯಕ್ತಿಯ ಜೊತೆ ಮಾತನಾಡುವದರಿಂದ, ಮುಟ್ಟುವದರಿಂದ, ಬಳಸಿದ ವಸ್ತುಗಳನ್ನು ಮುಟ್ಟುವದರಿಂದ, ಗಾಳಿ ತೆಗೆದುಕೊಳ್ಳುವದರಿಂದ ಈ ರೋಗ ಹರಡುವದಿಲ್ಲ. ಇದರ ಬಗ್ಗೆ ಅನಾವಶ್ಯಕವಾದ ಭಯ ಬೇಡ ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಏಡ್ಸ್ ರೋಗ ಪೀಡಿತರ ಬಗ್ಗೆ ಸಮಾಜ ಕೀಳರಿಮೆ ತಾಳದೆ, ರೋಗಿಗಳಿಗೆ ತೊಂದರೆ ನೀಡಿದರೆ, ಅವರು ಮಾನಸಿಕವಾಗಿ ಮತ್ತಷು ಕುಗ್ಗಿ ಬೇಗನೆ ಸಾವಿಗೆ ತುತ್ತಾಗುತ್ತಾರೆ. ಆದ್ದರಿಂದ ಅವರಿಗೂ ಕೂಡಾ ಬದಕಲು ಅನವು ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗಪ್ಪ ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ, ಗಂಗಾಜ್ಯೋಜಿ ಗಂಜಿ, ಮಂಗಲಾ ಚಂದಾಪುರೆ, ಗಂಗಮ್ಮ, ರೇಷ್ಮಾ ನಕ್ಕುಂದಿ, ಅರ್ಚನಾ ಸಿಂಗೆ, ಅನಿತಾ ಕಣಸೂರ್, ಚಂದಮ್ಮ ಮರಾಠಾ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.