ಜಾಗೃತಿ ಜಾಥಾ


ಹುಬ್ಬಳ್ಳಿ,ಮೇ.31: ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಭಾರತೀಯ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿ ಶಾಖೆ ಹಾಗೂ ಕಿಮ್ಸ್ ಅಂಕಾಲಜಿ ವಿಭಾಗದ ವತಿಯಿಂದ ನಗರದ ಕಿಮ್ಸ್ ನಲ್ಲಿ ಜಾಗೃತಿ ಜಾಥಾ ನಡೆಯಿತು.
ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳ ಸಹಯೋದಲ್ಲಿ ಆರಂಭವಾದ ಜಾಥಾವು ಕಿಮ್ಸ್ ಆವರಣದಿಂದ ಹೊರಟು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡಿತು. ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಕೆ. ಶಶಿಧರ ಮಾತನಾಡಿ, ಪ್ರತಿ ದಿನ 5500 ಜನರು ಹೊಸದಾಗಿ ತಂಬಾಕು ಸೇವನೆ ಮಾಡುತ್ತಿದ್ದು, ಇದು ಸಮಾಜವನ್ನು ಅಧಃ ಪತನಕ್ಕೆ ತಳ್ಳುತ್ತಿದೆ. ಅತಿಯಾದ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಕಾಯಿಲೆ ಬರುವ ಮುನ್ನವೇ ಎಚ್ಚರಿಕೆ ಅಗತ್ಯ. ಬಂದಾದ ಮೇಲೆ ಚಿಕಿತ್ಸೆ ಪಡೆದು ವಾಸಿಯಾದವರ ಸಂಖ್ಯೆ ಕಡಿಮೆ. ಈ ನಿಟ್ಟಿನಲ್ಲಿ ಸಾರ್ವಜನಿಕರೇ ಸಾಕಷ್ಟು ಜಾಗೃತಿ ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.
ತಂಬಾಕು ಸೇವನೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜಾರಿಗೆ ತರುವ ಅಗತ್ಯವಿದೆ ಎಂದರು.
ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಕ್ಯಾನ್ಸರ್ ಗೆ ಚಿಕಿತ್ಸೆ ಇದೆ. ಆದರೆ ಕಾಯಿಲೆ ಹಂತಗಳು ಮೀರಿದ ಮೇಲೆ ಚಿಕಿತ್ಸೆ ಫಲಪ್ರದ ಆಗುವುದಿಲ್ಲ ಎಂದರು. ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಅಂಕಾಲಜಿ ವಿಭಾಗದ ಡಾ. ರವಿ ಕೊಪ್ಪದ, ಡಾ. ಸಂಜಯ ಪವಾರ್, ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ವೆಂಕಟೇಶ ಮೂಲಿಮನಿ, ಕಾರ್ಯದರ್ಶಿ ಡಾ. ಆನಂದ ವರ್ಮಾ ಇತರರು ಜಾಥಾದಲ್ಲಿ ಭಾಗವಹಿಸಿದ್ದರು.