ಜಾಗತಿಕ ಶೈಕ್ಷಣಿಕ ತಾಣವಾಗಿ ಭಾರತ- ಮೋದಿ

ನವದೆಹಲಿ ಸೆ 22- ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಭಾರತವನ್ನು ಜಾಗತಿಕ ಶೈಕ್ಷಣಿಕ ತಾಣವನ್ನಾಗಿ ಮಾರ್ಪಡಿಸಲು ಅನುಕೂಲವಾಗಲಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅಸ್ಸಾಂನ ರಾಜಧಾನಿ ಗುವಾಹಟಿಯ ಐಐಟಿ ಘಟಿಕೋತ್ಸವ ವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಘಟಿಕೋತ್ಸವ ಭಾಷಣ ಮಾಡಿದ ಅವರು, ದೇಶದಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲು ನೀತಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಯುವಕರ ಮನದಾಳದಲ್ಲಿ ಮನೆಮಾಡಿರುವ ಕನಸುಗಳು ದೇಶದ ಸ್ವರೂಪವನ್ನು ಬದಲಾಯಿಸುವಲ್ಲಿ ನೆರವಾಗಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ತಂತ್ರಜ್ಞಾನದ ಜೊತೆ ಶಿಕ್ಷಣವನ್ನು ಸಂಪರ್ಕಿಸುವ ಗುರಿಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆಯೆಂದು ಅವರು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ವೇದಿಕೆಯೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ನೀತಿಯಡಿಯಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಹಾಗೂ ಈ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುನ್ನೂರು ವಿದ್ಯಾರ್ಥಿಗಳು ಪಿಎಚ್ ಡಿ ಪದವಿ ಪಡೆದಿರುವುದಕ್ಕೆ ಪ್ರಧಾನಿ ಅಭಿನಂದಿಸಿದರು.