ಜಾಗತಿಕ ತಾಪಮಾನ ಹೆಚ್ಚಳ: ಕಳವಳ

ಬೀದರ್:ಮೇ.27: ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ಡಾ. ಪೃಥ್ವಿರಾಜ್ ಲಕ್ಕಿ ಹೇಳಿದರು.

ನಗರದ ನೌಬಾದ್‍ನ ಸಿದ್ಧರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಆಯೋಜಿಸಿದ್ದ ಜಾಗತಿಕ ತಾಪಮಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವ ಹಾಗೂ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವ ಮೂಲಕ ತಾಪಮಾನ ತಗ್ಗಿಸಬಹುದು ಎಂದು ಹೇಳಿದರು.

ಇಂಧನ ಬಳಕೆ ಕಡಿಮೆ ಮಾಡಬೇಕು. ಸಣ್ಣ ಪುಟ್ಟ ಕೆಲಸಕ್ಕೆ ಸೈಕಲ್ ಬಳಸಬೇಕು. ಎಲೆಕ್ಟ್ರಾನಿಕ್ ತ್ಯಾಜ್ಯ ಕಡಿಮೆ ಮಾಡಬೇಕು. ಸುಸ್ಥಿರ ಆಹಾರ ಪದ್ಧತಿ ಅನುಸರಿಸಬೇಕು. ಪ್ರತಿ ಹನಿ ನೀರು ಉಳಿಸಬೇಕು ಎಂದು ಹೇಳಿದರು.

ಕಚೇರಿಗಳ ಕಿಟಕಿ ಮತ್ತು ಬಾಗಿಲುಗಳನ್ನು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ತೆರೆದಿಟ್ಟು, ನೈಸರ್ಗಿಕವಾಗಿ ಸಿಗುವ ಗಾಳಿ, ಬೆಳಕನ್ನು ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರಾಚಾರ್ಯ ಡಾ. ರೂಪೇಶ ಎಕಲಾರಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.