ನ್ಯೂಯಾರ್ಕ್, ಜು.೫- ಒಂದೆಡೆ ಭಾರತದ ಹಲವೆಡೆ ಭಾರೀ ಮಳೆಗೆ ಈಗಾಗಲೇ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದ್ದರೆ ಮತ್ತೊಂದೆಡೆ ಜುಲೈ ೩ರಂದು ಉಷ್ಣತೆಯ ವಿಚಾರದಲ್ಲಿ ಜಾಗತಿಕ ದಾಖಲೆ ಸೃಷ್ಟಿಯಾಗಿದೆ. ಅಮೆರಿಕಾದ ನ್ಯಾಷನಲ್ ಸೆಂಟರ್ಸ್ ಫಾರ್ ಎನ್ವಿರಾನ್ಮೆಂಟಲ್ ಪ್ರಿಡಿಕ್ಷನ್‌ನ ಮಾಹಿತಿಯ ಪ್ರಕಾರ ಜುಲೈ ೩ರಂದು ಜಾಗತಿಕವಾಗಿ ದಾಖಲಾದ ಅತ್ಯಂತ ಬಿಸಿಯಾದ (ಸೆಕೆಯಿಂದ ಕೂಡಿದ) ದಿನವಾಗಿದೆ ಎಂದು ದಾಖಲಾಗಿದೆ.
೨೦೧೬ರ ಆಗಸ್ಟ್ ತಿಂಗಳಲ್ಲಿ ಜಾಗತಿಕ ಸರಾಸರಿ ತಾಪಮಾನ ೧೬.೯೨ ಡಿಗ್ರಿ ಸೆಲ್ಸಿಯಸ್ ಈ ವರೆಗಿನ ಅತ್ಯಂತ ಹೆಚ್ಚು ದಾಖಲೆಯಾಗಿತ್ತು. ಆದರೆ ಜುಲೈ ೩ರ ದಾಖಲೆ ಎಲ್ಲವನ್ನೂ ಅಳಿಸಿ ಹಾಕಿದೆ. ಜುಲೈ ೩ರಂದು ಜಾಗತಿಕ ಸರಾಸರಿ ತಾಪಮಾನ ಪ್ರಮಾಣ ಬರೊಬ್ಬರಿ ೧೭.೦೧ ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದೆ. ಇತ್ತೀಚಿಗಿನ ದಿನಗಳಲ್ಲಿ ಅಮೆರಿಕಾದ ದಕ್ಷಿಣ ಭಾಗ ಹಾಗೂ ಚೀನಾದ ಹಲವೆಡೆ ತಾಪಮಾನ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದು, ಜಾಗತಿಕ ಸರಾಸರಿ ತಾಪಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿದೆ ಎನ್ನಲಾಗಿದೆ. ಅದರಲ್ಲೂ ಚೀನಾದಲ್ಲಿ ೩೫ ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರೆ ಉತ್ತರ ಆಫ್ರಿಕಾದಲ್ಲಿ ತಾಪಮಾನವು ೫೦ ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿದೆ. ಆದರೆ ಅತ್ತ ಸದಾ ಮಂಜುಗಡ್ಡೆಯಿಂದ ಕೂಡಿರುವ ಅಂಟಾರ್ಟಿಕಾದಲ್ಲಿ ಸದ್ಯ ಚಳಿಗಾಲವಿದ್ದರೂ ತಾಪಮಾನದಲ್ಲಿ ಏರಿಕೆ ದಾಖಲಾಗಿರುವುದು ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಆಘಾತ ಮೂಡಿಸಿದೆ. ಶ್ವೇತ ಖಂಡದ ಅರ್ಜೆಂಟೀನಾ ದ್ವೀಪಗಳಲ್ಲಿರುವ ಉಕ್ರೇನ್‌ನ ವೆರ್ನಾಡ್‌ಸ್ಕಿ ಸಂಶೋಧನಾ ನೆಲೆಯಲ್ಲಿ ಇತ್ತೀಚೆಗೆ ತನ್ನ ಜುಲೈ ತಾಪಮಾನದ ದಾಖಲೆಯನ್ನು ೮.೭ ಡಿಗ್ರಿ ಸೆಲ್ಸಿಯಸ್‌ನೊಂದಿಗೆ ದಾಖಲೆ ನಿರ್ಮಿಸಿದೆ.